ಅಭಿಪ್ರಾಯ / ಸಲಹೆಗಳು

ಶ್ರೀಮಂತಿ ಬಾಯಿ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ ಮಂಗಳೂರು

ಶ್ರೀಮಂತ ಬಾಯಿ ಸ್ಮಾರಕ ವಸ್ತು ಸಂಗ್ರಹಾಲಯ

 

 

ಮಂಗಳೂರು ಸಮುದ್ರ ತೀರದಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಳ.  ಇದರ ಪ್ರಾಚೀನ ಹೆಸರು ಮಂಗಳಾಪುರ. ಪರುಶರಾಮ ಕ್ಷೇತ್ರ ಎಂಬ ಹೆಸರೂ ಇತ್ತು. ಇಲ್ಲಿನ ಇತಿಹಾಸ ಬನವಾಸಿ ಕದಂಬರ ಕಾಲದಿಂದ ಪ್ರಾರಂಭವಾಗುತ್ತದೆ. ಆಳುಪರನ್ನು ಇಲ್ಲಿಯ ಅತ್ಯಂತ ಪ್ರಾಚೀನ ಅರಸು ಮನೆತನ ಎಂದು ಹೇಳಲಾಗಿದೆ. ಕನ್ನಡದ ಅತ್ಯಂತ ಪ್ರಾಚೀನ ಶಾಸನವಾದ ಹಲ್ಮಿಡಿಯಲ್ಲಿ ಆಳುಪರ ಉಲ್ಲೇಖವಿದೆ. ಈ ಭಾಗವು ಹೊಯ್ಸಳ, ವಿಜಯನಗರ, ಕೆಳದಿ ಅರಸರ, ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. 1799ರಲ್ಲಿ ಈ ಪ್ರದೇಶ ಆಂಗ್ಲರ ವಶವಾದ ಮೇಲೆ 1834 ರಲ್ಲಿ ಇಲ್ಲಿಗೆ ಬಂದ ಬಾಷೆಲ್ ಮಿಷನ್‍ರವರು ಪ್ರಾರಂಭಿಸಿದ ಇಂಗ್ಲೀಷ್ ಶಾಲೆ, ಮುದ್ರಣ ಯಂತ್ರ, ಹೆಂಚಿನ ಕಾರ್ಖಾನೆ, ಮತ್ತು ನೇಯ್ಗೆ ಕಾರ್ಖಾನೆ ಆಧುನೀಕತೆಗೆ ಕಾರಣವಾಯಿತು.  

 

ವಸ್ತುಸಂಗ್ರಹಾಲಯ

 

ಶ್ರೀಮಂತಿಬಾಯಿ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ ಕರ್ನಲ್ ವಿ. ಆರ್. ಮಿರಾಜ್‍ಕರ್‍ ರವರು ತಮ್ಮ ತಾಯಿಯವರ ಸ್ಮರಣಾರ್ಥ ಬಳುವಳಿಯಾಗಿ ಕೊಟ್ಟಿರುವ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಟ್ಟಡವನ್ನು ಶ್ರೀ ಮಿರಾಜ್‍ಕರ್‍ ರವರು 1955 ರಲ್ಲಿ ಕರ್ನಾಟಕ ಸರ್ಕಾರಕ್ಕೆ ದಾನವಾಗಿ ನೀಡಿದರು. 1955 ರಲ್ಲಿ ತನ್ನ ತಾಯಿಯ ಸ್ಮರಣಾರ್ಥವಾಗಿ ಸರ್ಕಾರಕ್ಕೆ ದಾನ ನೀಡಿದ ನಂತರ 04-05-1960ರಲ್ಲಿ ಅಧಿಕೃತವಾಗಿ ಆಗಿನ ಉಪರಾಷ್ಟ್ರಪತಿಯಾಗಿದ್ದ ಶ್ರೀಮಾನ್ ಬಿ.ಡಿ. ಜತ್ತಿಯವರು ಶ್ರೀಮಂತಿಬಾಯಿ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯವೆಂಬ ನಾಮಕರಣದೊಂದಿಗೆ ಈ ವಸ್ತುಸಂಗ್ರಹಾಲಯವನ್ನು ಉದ್ಘಾಟನೆ ಮಾಡಿದರು.

 

ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಲಾಹೋರ್‍ ನಲ್ಲಿ ವೈದ್ಯರಾಗಿದ್ದ ಮಿರಾಜ್‍ಕರ್‍ ರವರು ಅಲ್ಲಿನ ಹಡಗಿನ ಆಕಾರದ ಕಟ್ಟಡದಿಂದ ಪ್ರೇರಿತರಾಗಿ ಬಿಜೈನ ಬೆಟ್ಟಗುಡ್ಡದಲ್ಲಿ ತನ್ನ ತಾಯಿಯ ನೆನಪಿಗೋಸ್ಕರ 1939 ರಲ್ಲಿ ಮುಂಬೈನ ನುರಿತ ಇಂಜಿನಿಯರಿಂದ ಹಡಗಿನ ಆಕಾರದಲ್ಲಿ ಈ ಕಟ್ಟಡವನ್ನು ನಿರ್ಮಿಸಿದ್ದರು. ಈ ಕಟ್ಟಡವು ಮಂಗಳೂರಿನ ಕಾಂಕ್ರೀಟ್ ಕಟ್ಟಡಗಳಲ್ಲಿ ಎರಡನೆಯದು ಹಾಗೂ ವಿದ್ಯುತ್ ಸಂಪರ್ಕ ಹೊಂದಿದ ಕಟ್ಟಡಗಳಲ್ಲಿ ಮೊದಲನೆಯದು ಎನ್ನಲಾಗಿದೆ. ಪ್ರಾರಂಭದಲ್ಲಿ ಈ ಕಟ್ಟಡ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಅಧೀನದಲ್ಲಿತ್ತು. ನಂತರ ಈ ಕಟ್ಟಡವನ್ನು ದಿನಾಂಕ 05-04-1995 ರಂದು ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರಿಸಲಾಯಿತು.

 

ಈ ಬಂಗಲೆಯನ್ನು ಯಥಾಸ್ಥಿತಿಯನ್ನು ಕಾಪಾಡಿಕೊಂಡು ಕರ್ನಲ್ ಮಿರಾಜ್‍ಕರ್‍ ರವರು ದೇಶ ವಿದೇಶಗಳಿಂದ ಸಂಗ್ರಹಿಸಿದ ಅಪರೂಪದ ಪ್ರಾಚ್ಯವಸ್ತುಗಳು, ಅಂದಿನ ಜಿಲ್ಲಾಧಿಕಾರಿ ಪದ್ಮನಾಭನ್ ಸಂಗ್ರಹಿಸಿಕೊಟ್ಟ ಪ್ರಾಚ್ಯವಸ್ತುಗಳು, ಸ್ಥಳೀಯ ದಾನಿಗಳು ಕೊಟ್ಟ ಪ್ರಾಚ್ಯವಸ್ತುಗಳು, ಇಲಾಖೆಯಿಂದ ಕ್ಷೇತ್ರಕಾರ್ಯದಲ್ಲಿ ಸಂಗ್ರಹಿಸಿದ ಪ್ರಾಚ್ಯವಸ್ತುಗಳು ಹಾಗೂ ರಾಜ್ಯದ ವಿವಿಧ ಕಲಾವಿದರಿಂದ ರಚಿಸಿದ ಚಿತ್ರಕಲೆಗಳು ಮುಂತಾದವುಗಳನ್ನು ಸಂಗ್ರಹಿಸಿ ಪ್ರದರ್ಶಿಸಿದ್ದಾರೆ.

 

ಈ ವಸ್ತುಸಂಗ್ರಹಾಲಯದ ನೆಲ ಅಂತಸ್ತಿನ ಪ್ರವೇಶ ದ್ವಾರದಲ್ಲಿ ಉಡುಪಿಯ ಕೊಪ್ಪಲವಾಡಿಯಿಂದ ಸಂಗ್ರಹಿಸಿದ ಶಿಲಾಯುಗದ ಮಾನವನು ಉಪಯೋಗಿಸುತಿದ್ದ ಆಯುಧಗಳು, ಕನ್ನಡ ಲಿಪಿಯ ವಾಲ್ಮೀಕಿ ರಾಮಾಯಣ, ನರಸಿಂಹಾವತಾರ, ವೈದ್ಯ ಗ್ರಂಥ ಮೊದಲಾದ ತಾಳೆಗರಿಯ ಗ್ರಂಥಗಳು, ಕಡತಗಳು, ಕೆಳದಿ ವೆಂಕಟಪ್ಪ ನಾಯಕನಿಗೆ ಸಂಬಂಧಿಸಿದ 17 ನೇ ಶತಮಾನದ ತಾಮ್ರಪಟ ಶಾಸನ, ಬ್ರಿಟೀಷರು ಮತ್ತು ಮೈಸೂರು ಮಹಾರಾಜರ ನಾಣ್ಯಗಳು, 18ನೇ ಶತಮಾನದ ರಾಮ, ಸೀತೆ ಮತ್ತು ಲಕ್ಷ್ಮಣರ ಕಂಚಿನ ವಿಗ್ರಹಗಳು, ಸ್ಥಳೀಯ ದೈವಗಳಿಗೆ ಸಂಬಂಧಿಸಿದ ಕಂಚಿನ ವಿಗ್ರಹಗಳು, 16ನೇ ಶತಮಾನದ ದೀಪಸ್ತಂಭಗಳು, 15ನೇ ಶತಮಾನದ ದೀಪಮಲ್ಲಿ 16ನೇ ಶತಮಾನದ ಹಯಗ್ರೀವ, ಪುರಾತನ ಗಡಿಯಾರ ಮೊದಲಾದವು ಇಲ್ಲಿವೆ.

 

ನಂತರ ಚಿತ್ರಕಲಾ ಗ್ಯಾಲರಿ ಇದ್ದು ಇಲ್ಲಿ ಪ್ರಸಿದ್ಧ ಕಲಾವಿದರಗಳ ವಿವಿಧ ಚಿತ್ರಕಲೆಗಳನ್ನು ಪ್ರದರ್ಶಿಸಲಾಗಿದೆ. ಅದರಲ್ಲಿ ಮಂಗಳೂರಿನ ಗಣೇಶ ಸೋಮಯ್ಯಾಜಿಯರ ಚಿತ್ರ, ಬೆಂಗಳೂರಿನ ಪ್ರಖ್ಯಾತ ಕಲಾವಿದರಾದ ವಾಸುದೇವರವರ ಚಿತ್ರ, ಹೆಬ್ಳೆಕರ್‍ರವರ ಮರಳಿ ಮನೆಯತ್ತ ಚಿತ್ರ, ಜೋಗ ಜಲಪಾತದ ದೃಶ್ಯ, ಹಾಗೂ 18ನೇ ಶತಮಾನದ ನಟರಾಜ ವಿಗ್ರಹ ವಿಶೇಷವಾದದ್ದು ಕಂಡುಬರುತ್ತದೆ.

 

ನಂತರ 18ನೇ ಶತಮಾನದ ಸ್ಥಳೀಯ ವಿವಿಧ ರೀತಿಯ ಆರತಿಗಳಿದ್ದು ಅವುಗಳಲ್ಲಿ ಸರ್ಫಾರತಿ, ರಥಾರತಿ, ವಿಶೇಷವಾದವುಗಳು. ವಿವಿಧ ರೀತಿಯ ಆಯುಧಗಳಿದ್ದು, ಪರಶುರಾಮ ಖಡ್ಗ, ವಡಿಕತ್ತಿ, ಚಂದ್ರಾಯುಧ, ಬಂದೂಕು, ಪಿಸ್ತೂಲ್, ವ್ಯಾಗ್ರನಖ, ಜಪಾನಿನ ಖಡ್ಗಗಳು ಮನಸೂರೆಗೊಳ್ಳುತ್ತದೆ. ಮಾನವ ವಂಶಸಾಸ್ತ್ರಕ್ಕೆ ಸಂಬಂದಿಸಿದ ಪೂಜಾ ಸಾಮಗ್ರಿಗಳು ವಿಶೇಷ. ಪಿರಂಗಿ, ಅದರ ಗುಂಡು, ಸಂಗೀತ ವಾದ್ಯಗಳಾದ ಢಮರು, 19ನೇ ಶತಮಾನದ ವೀಣೆ, ಉಡದ ಚರ್ಮದ ತಬಲ, ಕಹಳೆ ಆಕರ್ಷಣೀಯವಾಗಿವೆ. 18 ನೇ ಶತಮಾನದ ಮೂಕಾಂಭಿಕಾ ದೇವಸ್ಥಾನದ ದೀಪಸ್ತಂಭ, ವಿಶೇಷವಾಗಿದೆ. ಕಂಚಿನ ಸ್ಥಳೀಯ ದೈವದ ಚಿಕ್ಕ ಚಿಕ್ಕ ಮೂರ್ತಿಗಳು, 15 ನೇ ಶತಮಾನದ ಘಂಟೆಗಳ ಸಮೂಹ, ಮೇಕೆ ಕಟ್ಟುವಿನಿಂದ ಸಂಗ್ರಹಿಸಿರುವ ಮರದ ಬೂತಗಣ, ಸ್ತ್ರೀ ಮೂರ್ತಿ, ನರನಂದಿ 16 ನೇ ಶತಮಾನದ ತ್ರಿಮುಖ ನಂದಿ, ಕ್ರೈಸ್ತ ಮೂರ್ತಿಗಳು, ಚಾಮುಂಡೇಶ್ವರಿ, ಗುಮ್ಮಟೇಶ್ವರ, ಮಧ್ವಚಾರ್ಯರ ಮರದ ಶಿಲ್ಪಗಳು ಕಣ್ಮನ ಸೆಳೆಯುವಂತಿದೆ. 16 ನೇ ಶತಮಾನದ ಕುಂದಾಪುರದ ಶಂಕರ ನಾರಾಯಣ ದೇವಸ್ಥಾನದ ಮರದ ಅಲಂಕಾರ ಪಟ್ಟಿ, ನಾರವೀಯ ಯೋಧ ಹಾಗೂ ಸ್ತ್ರೀ ವಿಗ್ರಹಗಳು, ಮಂಜುನಾಥ ದೇವಾಲಯದ 11 ನೇ ಶತಮಾನದ ಚೋಳ ಶೈಲಿಯ ಸಾಸ್ತ, ಜೈನ ತೀರ್ಥಂಕರ ವಿಗ್ರಹಗಳು, ಅವುಗಳಲ್ಲಿ ಮಹಾವೀರನ ವಿಗ್ರಹಗಳು, ಬಾರ್ಕೂರಿನ 11 ನೇ ಶತಮಾನದ ಪಾರ್ಶ್ವನಾಥ ವಿಗ್ರಹವು ಅಮೂಲ್ಯವಾದದ್ದು. ಹೊಯ್ಸಳ ಶೈಲಿಯ ಬಾರ್ಕೂರಿನ ಸರಸ್ವತಿ ವಿಗ್ರಹವು ಅತ್ಯಂತ ಅಲಂಕೃತವಾಗಿದೆ. ಗಾಂಧಾರ ಶೈಲಿಯ ಬೋಧಿಸತ್ವ, ಮಥುರದ ಸ್ತ್ರೀ ಶಿರಸ್ಸು, ಇವುಗಳು ವಿಶೇಷ.

 

ಮೊದಲಂತಸ್ತಿನ ಮೆಟ್ಟಿಲು ಹತ್ತುವಾಗ ಪ್ರದರ್ಶಿಸಿರುವ ಅಮೂಲ್ಯವಾದ ಕಪ್ಪು ಬಿಳುಪಿನ ಮೈಸೂರಿನ ಕೃಷ್ಣರಾಜಸಾಗರ, ಶ್ರೀರಂಗಪಟ್ಟಣದ ದರಿಯಾದೌಲತ್, ಮಂಗಳೂರಿನ ಕದ್ರಿ ದೇವಸ್ಥಾನ ಮೊದಲಾದ ಛಾಯಾಚಿತ್ರಗಳು ವಿಶೇಷವಾಗಿದೆ.

 

ಮೊದಲನೇಯ ಮಹಡಿಯಲ್ಲಿ ಮಿರಾಜ್‍ಕರ್ ರವರು ಸಂಗ್ರಹಿಸಿ ವಸ್ತುಸಂಗ್ರಹಾಲಯಕ್ಕೆ ದಾನವಾಗಿ ಕೊಟ್ಟ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಅಲಂಕೃತಗೊಂಡ ಮರದ ಟೇಬಲ್, ಪ್ರವಾಸದ ಪೆಟ್ಟಿಗೆ, ಕನ್ನಡಿಯನ್ನೊಳಗೊಂಡ ಸೋಪಾಸಟ್ಟ್, ಟಿಬೇಟಿಯನ್ ಆಧುನಿಕ ಭಗವಾನ ಬುದ್ದ ಆಕರ್ಶಕವಾಗಿದೆ. ಸಮುದ್ರ ಚಿಪ್ಪಿನಿಂದ ಮಾಡಿದ ವಸ್ತುಗಳು, ಜರೋಸಲಂನಿಂದ ಸಂಗ್ರಹಿಸಿರುವ ಅರಬಿಕ್ ಅಕ್ಷರಗಳನ್ನು ಹೊಂದಿರುವ ಕೊಳವೆ, ಜೀವಂತ ಮೀನಿನಂತೆ ಕಾಣುವ ಬೆಳ್ಳಿಯಿಂದ ತಯಾರಿಸಿದ ಮೀನುಗಳು ಹಾಗೂ ಚಿಕ್ಕ ಚಿಕ್ಕ ಕುರ್ಚಿ, ಟೇಬಲ್, ಚಮಚಗಳು ಕಲೆಯನ್ನು ಪ್ರತಿಬಿಂಬಿಸುತ್ತದೆ. ಸಂಸ್ಕೃತ ಭಾಷೆ ನೇವಾರಿ ಲಿಪಿ ಹೊಂದಿರುವ ವಜ್ರಸತ್ವ, ನೇಪಾಳದ ಪ್ರಧಾನ ಮಂತ್ರಿಯವರು ಮಿರಾಜ್‍ರವರಿಗೆ ಕೊಟ್ಟ ಖಡ್ಗ, ಚೀನಾ ದೇಶದ ಮರದ ಅಲಂಕಾರಿಕ ವಸ್ತುಗಳು, ಜಾವಾದ ನಾಟ್ಯಸುಂದರಿ, ಕಂಚಿನ ತಟ್ಟೆಯಲ್ಲಿ ಕೆತ್ತಿರುವ ಮ್ಯಾಕ್‍ಬೆತ್ ನಾಟಕದ ದೃಶ್ಯ ಕಣ್ಣ್‍ಮನ ಸೆಳೆಯುವಂತಿದೆ. ದಂತದಿಂದ ಅಲಂಕೃತವಾದ ಮರದ ಪರದೆ, ದಂತದಿಂದ  ಕೆತ್ತಲಾದ ಗಾಂಧಿತತ್ವದ ತ್ರಿಮೂರ್ತಿ ಗಣೇಶ, ಶ್ರೀಕೃಷ್ಣ, ಹಾಗೂ ಮಿರಾಜ್‍ಕರವರ ಭಾವ ಚಿತ್ರ ವಿಸ್ಮಯಕಾರ್ಯವಾಗಿದೆ. ಜಿರಾಫೆ ಎಲುಬಿನಿಂದ ಮಾಡಿದ ಮರದ ಹಿಡಿಕೆ, ಘೆಂಡಾಮೃಗ ಪಾದದಿಂದ ತಯಾರಿಸಿದ ಆಶ್‍ಟ್ರೇ, ದಂತದಿಂದ ಮಾಡಿದ ತಿರುಪತಿಯ ತಿರುಚಿಯ ವಿನಾಯಕ ದೇವಸ್ಥಾನದ ಮಾದರಿ ಅಮೂಲ್ಯವಾದದ್ದು. ದಕ್ಷಿಣ ಆಪ್ರಿಕಾದ ಮರದ ಕೆತ್ತನೆಯ ವಸ್ತುಗಳು, ಡ್ಯಾನಿಕ್ ದೇಶದ ಪಿಂಗಾಣಿ ಗೊಂಬೆ, ಶೇಕ್ಸ್‍ಪಿಯರನ ಚಿಕ್ಕ ಚಿಕ್ಕ ಪುಸ್ತಕಗಳು, 19 ನೇ ಶತಮಾನದ ಚೀನಾ ಜಪಾನ್ ದೇಶದ ಪಿಂಗಾಣಿ ಗೊಂಬೆಗಳು, ಸ್ತ್ರೀ ವಿಗ್ರಹಗಳು ಮನಸೂರೆಗೊಳ್ಳುತ್ತವೆ. ಪರ್ಶಿಯನ್ ದೇಶದ ಚಿಕ್ಕ ಗೋಲಿಯ ಪಿಂಗಾಣಿಯ ಬಟ್ಟಲಿದ್ದು, ಈ ಬಟ್ಟಲಿಗೆ ನೀರು ಹಾಕಿದರೆ ಸ್ತ್ರೀ ಚಿತ್ರಕಾಣುವುದು ತಂತ್ರಗಾರಿಕೆಯ ವಿಶೇಷವೆನ್ನಬಹುದು, ಜಕಸ್ಲೋವಾಕೀಯ ದೇಶದ ಗಾಜಿನ ಬಟ್ಟಲು ಹಾಗೂ ಗ್ಲಾಸುಗಳು ಇಲ್ಲವೆ.  ಇಲ್ಲಿ ಪ್ರದರ್ಶಿಸಿರುವ ಮಣ್ಣಿನಿಂದ ಮಾಡಿದ ಭಾರತದ ನಕ್ಷೆಯು ಅಪರೂಪವಾದದ್ದು.

 

ಮಕ್ಕಳ ವಿಭಾಗವಾಗಿದ್ದು, ಮಕ್ಕಳ ಆಟಿಕೆಯ ವಿಮಾನ, ಒಂಟೆ, ಮೊದಲಾದ ವಸ್ತುಗಳು, ವಿವಿಧ ರಾಜ್ಯದ ಸಂರ್ಪದಾಯಕ ಉಡುಗೆಯ ರಾಜಸ್ಥಾನ, ಕಾಶ್ಮೀರ, ಅಸ್ಸಾಂ, ಪಂಜಾಬ್, ಮೊದಲಾದ ರಾಜ್ಯದ ಸ್ತ್ರೀ ಚಿತ್ರಗಳು, ಯಕ್ಷಗಾನ ಹಾಗೂ ದೈವಕ್ಕೆ ಸಂಬಂದಿಸಿದ ಪಂಜುರ್ಳಿ, ಕಲ್ರ್ಲುಟಿ, ಕೋಟೆ ಚೆನ್ನಯ್ಯ, ಅತ್ತಾವರ ದೈವಂಗಲು, ಮುಡದಾರ ಪ್ರಮುಖವಾದವು, ಶ್ರೀ ರಾಮ, ಸೀತೆ, ಹನುಮ, ಶೂರ್ಪನಕಿ, ಯಕ್ಷಗಾನದ ಗೊಂಬೆಗಳು, ವಿಶೇಷ. ಮೈಸೂರು ಮೃಗಾಲಯದ ಕಪ್ಪು ಬಿಳುಪಿನ ಜಿರಾಫೆ, ಆನೆ, ಕಾಂಗೂರು ಮೊದಲಾದ ಛಾಯಚಿತ್ರಗಳು ವಿಶೇಷವಾದವು,

 

ಗಾಜಿನ ಮೇಲೆ ಚಿತ್ರಿಸಿರುವ ಆನೆಕಾದಾಡುವ ದೃಶ್ಯ, ನಾಗಹೆಡೆಯ, ಮರದ ಟಿಪಾಯಿ ಕುರಾನ್‍ಗ್ರಂಥ ಕೆತ್ತಿರುವ ಹಿತ್ತಾಳೆಯ ತಟ್ಟೆ, ಡ್ರಾಗನ್ ಚಿತ್ರವಿರುವ ಕುರ್ಚಿಗಳು, ಅಮೂಲ್ಯ, ವಿವಿಧ ರೀತಿಯ ಮರದ ವಸ್ತುಗಳು, ವಿವಿಧ ವಿದ್ಯುತ್ ದೀಪಗಳಿದ್ದು, ಇವುಗಳಲ್ಲಿ ಕೊಕ್ಕರೆಯ ಹಾಗೂ ಕಿಂಗಫೀಶರನ್ ಟೇಬಲ್ ದೀಪಗಳು, ವಿಸ್ಮಯ, ಚೀನದ ಡ್ರಾಗನ್ ಚಿತ್ರವಿರುವ ಮಡಿಕೆಗಳು ಅಮೂಲ್ಯವಾದವು.

 

ಗಾಂಧೀಜಿಯ ಛಾಯಾಚಿತ್ರ ಹೊಂದಿರುವ ಗ್ಯಾಲರಿಯು, ಗಾಂಧಿüಜೀಯವರ ಜನ್ಮಸ್ಥಳದಿಂದ ಅವರ ಮರಣದ ರಾಜ್‍ಘಟ್‍ವರಗಿನ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ, ಇವುಗಳಲ್ಲಿ ಗಾಂಧೀಜಿಯವರ ಪೊರಬಂದರಿನ ಮನೆ, ತಂದೆ ಕರಮಚಂದಗಾಂಧಿಯ ಪೋಟೋ, ಆರು ವರ್ಷದ ಬಾಲಕನಾಗಿದ್ದ ಗಾಂಧೀಜಿ, ಅವರು ವಕೀಲ ವೃತ್ತಿ, ಸ್ವಾತಂತ್ರ್ಯ ಸಂಗ್ರ್ರಾಮ, ಮಹಮ್ಮದ್‍ಅಲಿ ಜಿನ್ನ, ಲಾರ್ಡ ಮೌಂಟನ್‍ಬ್ಯಾಟನ್, ರವಿಂದ್ರನಾಥ ಠಾಗೂರ್, ಹೆಂಡತಿ ಕಸ್ತೂರಭಾ ಮತ್ತು ಇಂದಿರಾಗಾಂಧಿ ಇವರುಗಳ ಜೊತಗಿನ ಛಾಯಾಚಿತ್ರ ವಿಶೇಷವಾದವುಗಳು. ಗಾಂಧೀಜಿಯವರು ವಿದೇಶಗಳಿಗೆ ಬರೆದಂತಹ  ಪತ್ರಗಳು, ಅವುಗಳಲ್ಲಿ ಹಿಟ್ಲರಿಗೆ 23-07-1939 ರಲ್ಲಿ ಯುದ್ಧಬೇಡವೆಂದು ಬರೆದಿರುವ ಪತ್ರವು ವಿಶೇಷವೆನ್ನಬಹುದು.

 

ವಸ್ತುಸಂಗ್ರಹಾಲಯದ ಆವರಣದಲ್ಲಿ ಬೆಳ್ತಂಗಡಿ ಹಾಗೂ ಜಮಲಾಬಾದ್ ಕೋಟೆಯಿಂದ ಸಂಗ್ರಹಿಸಲಾದ 16 ನೇ ಶತಮಾನದ ಫಿರಂಗಿಗಳು, ಕ್ರಿ. ಶ 1440 ರ ವಿಜಯನಗರದ ಶ್ರೀ ಪ್ರತಾಪದೇವರಾಯನ ಭೂದಾನದ ಶಾಸನ, ಕ್ರಿ.ಶ 1377 ರ ವಿಜಯನಗರದ ಶ್ರೀ ಪ್ರತಾಪ ವೀರ ಹರಿಯರನು ಶ್ರೀ ತ್ರಯಂಬಕ ದೇವರಿಗೆ ಕೊಟ್ಟ  ಭೂದಾನದ ಶಾಸನ, ಕ್ರಿ. ಶ 1414 ರ ಬ್ರಹ್ಮಾವರದ ಪಂಚಲಿಂಗದೇವರಿಗೆ ಕೊಟ್ಟ ಭೂದಾನದ ಶಾಸನಗಳು ಹಾಗೂ 14 ನೇ ಶತಮಾನದ ಗಣೇಶ, 16 ನೇ ಶತಮಾನದ ವೀರಭದ್ರ, ಯೋಧ, ನಾಗಬ್ರಹ್ಮ, ಮಹಾಸತಿ ಮತ್ತು ವೀರಗಲ್ಲುಗಳು, ಮೊದಲಾದವುಗಳನ್ನು ವಸ್ತುಸಂಗ್ರಹಾಲಯದ ಆವರಣದಲ್ಲಿ ಪ್ರದರ್ಶಿಸಲಾಗಿದೆ.

ಇತ್ತೀಚಿನ ನವೀಕರಣ​ : 14-10-2020 01:07 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080