ಅಭಿಪ್ರಾಯ / ಸಲಹೆಗಳು

ಸರ್ಕಾರಿ ವಸ್ತುಸಂಗ್ರಹಾಲಯ ಗದಗ

ಗದಗ ಭವ್ಯ ಇತಿಹಾಸ, ಪರಂಪರೆಯನ್ನು ಹೊಂದಿರುವ ಜಿಲ್ಲೆಯಾಗಿದೆ. ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ವಾಸ್ತು ಮತ್ತು ಮೂರ್ತಿಶಿಲ್ಪಗಳ ನೆಲೆವೀಡಾದ ಗದಗ ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದ ಸ್ಥಳವಾಗಿತ್ತು. ಮಹಾಭಾರತದ ಅರ್ಜುನನ ಮೊಮ್ಮಗ ಜನಮೇಜಯ ರಾಜನು ಗದಗಿನಲ್ಲಿ ಸರ್ಪಯಾಗ ಮಾಡಿದ್ದನೆಂದು, ಅದರಿಂದ ಕೃತಪುರ ಎಂಬ ಹೆಸರು ಬಂದಿತ್ತೆಂದು ಪ್ರತೀತಿ ಇದೆ. ಈ ನಗರ ಕುಂತಳ ದೇಶದ, ಬೆಳ್ವಲ ನಾಡಿನ ಮಹಾ ಅಗ್ರಹಾರವಾಗಿತ್ತೆಂದು ಶಾಸನಗಳ ಆಧಾರದಿಂದ ತಿಳಿದುಬರುತ್ತದೆ. ಶಾಸನಗಳಲ್ಲಿ ಗದಗನ್ನು ಕೃತಪುರ, ಕರ್ತುಕ, ಕರ್ದುಗು, ಕಳ್‍ದುಗು, ಕರದುಗು, ಗಲದುಗ್, ಗರ್ದುಗ, ಗದಗು ಎಂದು ವಿಧವಿಧವಾಗಿ ಉಲ್ಲೇಖಿಸಲಾಗಿದೆ.

 

ಗದಗ ಜಿಲ್ಲೆಯ ಭೂ ಭಾಗವು ಇತಿಹಾಸ ಪೂರ್ವ ಕಾಲದಿಂದಲೂ ಪ್ರಸಿದ್ಧಿ ಪಡೆದಿತ್ತು. ಈ ಪ್ರದೇಶಗಳಲ್ಲಿ ಆದಿ ಹಳೆಶಿಲಾಯುಗ, ಸೂಕ್ಷ್ಮಶಿಲಾಯಗ, ನೂತನ ಶಿಲಾಯುಗ, ತಾಮ್ರ ಶಿಲಾಯುಗ ಹಾಗೂ ಬೃಹತ್ ಶಿಲಾಯುಗದ ಅನೇಕ ನೆಲೆಗಳು ದೊರೆತಿವೆ. ಇತಿಹಾಸ ಕಾಲದಲ್ಲಿ ಕ್ರಿ.ಶ. 6ನೇ ಶತಮಾನದಿಂದ ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಕಳಚೂರಿ, ಯಾದವ, ಹೊಯ್ಸಳ, ಸೇವುಣರು, ವಿಜಯನಗರ ಹೀಗೆ ಅನೇಕ ರಾಜ ಮನೆತನಗಳ ಆಳ್ವಕೆಗೆ ಒಳಪಟ್ಟಿತ್ತು. ಅವರ ಆಡಳಿತದ ಪ್ರತಿಫಲವಾಗಿ ಆನೇಕ ದೇವಾಲಯಗಳು, ಕೋಟೆ ಕೊತ್ತಲಗಳು, ಶಾಸನಗಳು, ಮೂರ್ತಿಶಿಲ್ಪಗಳು ಮುಂತಾದ ಸ್ಮಾರಕಗಳು ಇಂದಿಗೂ ಕಾಣಬಹುದಾಗಿದೆ. ಗದಗಿನಲ್ಲಿರುವ ತ್ರಿಕೂಟೇಶ್ವರ ದೇವಾಲಯ, ಸರಸ್ವತಿ ದೇವಾಲಯ ಹಾಗೂ ವೀರನಾರಾಯಣ ದೇವಾಲಯಗಳು ಹಾಗೂ ಗದುಗಿನ ಭಾರತ ಬರೆದ ಕವಿ ಕುಮಾರವ್ಯಾಸನಿಂದಾಗಿ ಗದಗ ಹೆಚ್ಚು ಪ್ರಾಮುಖ್ಯತೆಗಳಿಸಿದೆ.

 

ಗದಗ ನಗರದಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯವು ದಿನಾಂಕ 03.04.1998ರಂದು ಪ್ರಾರಂಭಗೊಂಡಿತು. ಇತಿಹಾಸದ ಯೋಗ್ಯ ಪ್ರತೀಕವಾಗಿರುವ ಈ ವಸ್ತುಸಂಗ್ರಹಾಲಯವು ಪ್ರಸ್ತುತ ಸುಮಾರು 700 ಪ್ರಾಚ್ಯವಸ್ತುಗಳ ಸಂಗ್ರಹವಿದ್ದು,  ಪ್ರಮುಖವಾಗಿ ನಾಡಿನ ಇತಿಹಾಸವನ್ನು ಬಿಂಬಿಸುವ ಮಹತ್ವದ ಮೂರ್ತಿಶಿಲ್ಪಗಳು, ಶಾಸನಗಳು, ವೀರಗಲ್ಲುಗಳು, ಉತ್ಖನನದ ಅವಶೇಷಗಳು, ಆಧುನಿಕ ವರ್ಣಚಿತ್ರ ಕಲಾಕೃತಿಗಳನ್ನು ಹೊಂದಿದೆ.

 

ಇತಿಹಾಸ ಪೂರ್ವಕಾಲ ಹಾಗೂ ಆರಂಭಿಕ ಇತಿಹಾಸ ಕಾಲದ ಪ್ರಾಚ್ಯಾವಶೇಷಗಳು; ಲಕ್ಕುಂಡಿ ಗ್ರಾಮದಲ್ಲಿ ಇಲಾಖೆಯಿಂದ ಕೈಗೊಂಡ ಉತ್ಖನನ ಕಾರ್ಯದಲ್ಲಿ ದೊರೆತ ಪ್ರಾಚ್ಯವಸ್ತುಗಳನ್ನು ಈ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ನೂತನ ಶಿಲಾಯುಗದ ಆಯುಧಗಳು, ಬೃಹತ್‍ಶಿಲಾಯುಗದ ಮಣ್ಣಿನ ಪಾತ್ರೆಗಳು, ಶಾತವಾಹನ ಕಾಲದ ಮಣ್ಣಿನ ಪಾತ್ರೆಗಳು, ಹಾಗೂ ವಿವಿಧ ಆಕಾರ, ಬಣ್ಣದ ಮಣಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

 

ನಾಣ್ಯಗಳು:

 

ಈ ವಸ್ತುಸಂಗ್ರಹಾಲಯದಲ್ಲಿ 19-20ನೇ ಶತಮಾನದ 50 ಬೆಳ್ಳಿಯ ನಾಣ್ಯಗಳ ಸಂಗ್ರಹವಿದೆ. ಇವುಗಳಲ್ಲಿ 34 ವಿಕ್ಟೋರಿಯಾ ರಾಣಿ, 05 ನಾಣ್ಯಗಳು ಚಕ್ರವರ್ತಿ 7ನೇ ಎಡ್ವರ್ಡ್‍ನ ಹಾಗೂ ಚಕ್ರವರ್ತಿ 5ನೇ ಜಾರ್ಜ್ ರಾಜನ 11 ನಾಣ್ಯಗಳಿವೆ.

 

ಸಮಕಾಲೀನ ಕಲಾಕೃತಿಗಳ ವಿಭಾಗ:

 

ಉತ್ತರ ಕರ್ನಾಟಕದ ಚಿತ್ರಕಲಾವಿದರು ವಿವಿಧ ವರ್ಣಗಳಿಂದ ರಚಿಸಿರುವ ಸುಮಾರು 55 ಆಧುನಿಕ ಸಮಕಾಲೀನ ವರ್ಣಚಿತ್ರ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಇವುಗಳು ತೈಲ ಮತ್ತು ಜಲವರ್ಣ, ಮಿಶ್ರ ಮಾದ್ಯಮ, ಪೆನ್ಸಿಲ್ ಸ್ಕೆಚ್, ಕ್ರಯಾನ್ಸ್, ಸ್ಕೆಚ್ ಪೆನ್ ಹಾಗೂ ಎಚಿಂಗ್ ವರ್ಣಗಳಲ್ಲಿ ರಚಿತವಾಗಿವೆ. ಮುಖ್ಯವಾಗಿ ಶ್ರೀ. ವಿಜಯ ಸಿಂಧೂರ ಜಮಖಂಡಿ ಯವರ “ಪೇಂಟಿಂಗ್ ನಂ.1” ವರ್ಣಚಿತ್ರದಲ್ಲಿ ವಿವಿಧ ಹೂಗಳನ್ನು ಬೇರೆ ಬೇರೆ ಬಣ್ಣಗಳ ಸಮ್ಮಿಶ್ರಣದಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.  ಶ್ರೀ. ಗೀರೀಶ್ ಕೆ. ಆದಣ್ಣವರ್, ನಿಪ್ಪಾಣಿ ಇವರ “ಮೈ ಹೌಸ್”  ಇದರಲ್ಲಿ ಹಳೆಯ ಮನೆಯ ಚಿತ್ರಣವಿದ್ದು, ಮನೆಯ ಒಡತಿ ಬೆಣ್ಣೆ ತೆಗೆಯುತ್ತಿದ್ದು, ಮನೆಯ ಯಜಮಾನ ಹಸುವನ್ನು ಮನೆಯೊಳಗೆ ತರುತ್ತಿರುವ ದೃಶ್ಯ ಮನೋಜ್ಞವಾಗಿ ಚಿತ್ರಿತವಾಗಿದೆ.  ಶ್ರೀ. ಬಿ. ಮಾರುತಿ, ಧಾರವಾಡ ಇವರ “ನೀರಿಗಾಗಿ” ವರ್ಣಚಿತ್ರವು ನಾಲ್ಕು ಜನ ಹೆಣ್ಣುಮಕ್ಕಳು ದೂರದ ಬಾವಿಯಿಂದ ನೀರು ತರುತ್ತಿರುವ ದೃಶ್ಯವಿದೆ.  ಶ್ರೀ. ಅನೀಲ್ ಬಿಹಾರಿ, ಗುಲಬರ್ಗಾ ಇವರು ಬಿಡಿಸಿದ “ಹೇರ್ ಡ್ರೆಸ್ಸಿಂಗ್” ಕಲಾಕೃತಿಯಲ್ಲಿ ಇಬ್ಬರು ವ್ಯಕ್ತಿಗಳ ಚಿತ್ರಣ ಹಾಗೂ ಹಾರಾಡುತ್ತಿರುವ ಪಕ್ಷಿಗಳ ಚಿತ್ರಣವಿದೆ. ಕೆ.ವಿ. ಕುಂದಗೋಳ್ ರವರ ಯಕ್ಷಗಾನ, ಹಂಪೆಯ ಕೃಷ್ಣ ದೇವಾಲಯ, ಎಸ್.ಎಸ್. ಪರೀತ್ ರವರ ಐ ಕಿಲ್ ಯು, ಇವುಗಳ ಜೊತೆಗೆ ಅನೇಕ ನಿಸರ್ಗ ಚಿತ್ರಣಗಳು, ದೃಶ್ಯಗಳು ಪ್ರಕೃತಿಯ ನೈಜ ಅನುಭವಗಳನ್ನು ಪ್ರತಿಬಿಂಬಿಸುತ್ತದೆ.

 

ಶಿಲ್ಪಗಳ ವಿಭಾಗ:

 

ಗದಗ ಜಿಲ್ಲೆಯ ವಿವಿಧ ಭಾಗಗಳಿಂದ ಸಂಗ್ರಹಿಸಲಾದ ಅನೇಕ ಶಿಲ್ಪಗಳನ್ನು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಕಲ್ಯಾಣ ಚಾಲುಕ್ಯ ಹೊಯ್ಸಳ ಸಮ್ಮಿಶ್ರಣ ಉತ್ತಮ ಮಾದರಿಗಳಾದ ಶಿಲ್ಪಗಳನ್ನು ದೇವಾಲಯದ ಭಾಗಗಳನ್ನು ಇಲ್ಲಿ ನೋಡಬಹುದು. ಶೈವ, ವೈಷ್ಣವ, ಜೈನ ಧರ್ಮಗಳನ್ನು ಪ್ರತಿಬಿಂಬಿಸುವ ಅನೇಕ ಮೂರ್ತಿಶಿಲ್ಪಗಳನ್ನು ವೀಕ್ಷಿಸಬಹುದು. ಕ್ರಿ.ಶ.ಸು. 9ನೇ ಶತಮಾನದ ರಾಷ್ಟ್ರಕೂಟರ ಕಾಲದ  ಗಜಲಕ್ಷ್ಮೀ ಪಟ್ಟಿಕೆ, ಕ್ರಿ.ಶ.ಸು. 11-12ನೇ ಶತಮಾನದ ಕಲ್ಯಾಣ ಚಾಲುಕ್ಯ ಕಾಲದ ವೀರಭದ್ರ, ಉಮಾಮಹೇಶ್ವರ, ಮಹಿಷಾಸುರ ಮರ್ದಿನಿ, ಕುಬೇರ, ಗರುಡ, ಸೂರ್ಯ, ವಿಷ್ಣು, ವಾಸುಕಿ, ಮಿಥುನ ಶಿಲ್ಪಗಳು, ಮಹಾವೀರ ಶಿಲ್ಪ, ಚಾಮರಧಾರಿ ಜೈನ ಶಿಲ್ಪ, ಹುನಗುಂದದಿಂದ ಸಂಗ್ರಹಿಸಲಾದ ಆದಿನಾಥ ಶಿಲ್ಪ ಹಾಗೂ ಜೈನ ತೀರ್ಥಂಕರ ಶಿಲ್ಪಗಳು ಈ ವಸ್ತುಸಂಗ್ರಹಾಲಯದ ಅತ್ಯಂತ ಆಕರ್ಷಣೆಗಳಾಗಿವೆ. ಹಾಗೆಯೇ ಅನೇಕ ವೀರಗಲ್ಲುಗಳು, ಶಾಸನಗಳು, ಅವುಗಳಲ್ಲಿ ಮುಖ್ಯವಾಗಿ ದಾನ ಚಿಂತಾಮಣಿ ಅತ್ತಿಮಬ್ಬೆಯು ಜೈನ ಬಸದಿ ಕಟ್ಟಿಸಲು ನೀಡಿದ ದಾನ ಶಾಸನ, ಡಂಬಳದಲ್ಲಿ ದೊರೆತ ಪಾರ್ಶ್ವನಾಥ ಶಿಲ್ಪ ಇದರ ಪಾದ ಪೀಠದ ಮೇಲೆ ಬಸದಿಯ ನಿರ್ಮಾಣ ತಿಳಿಸುವ 10ನೇ ಶತಮಾನದ ಕನ್ನಡ ಶಾಸನ ಇದೆ. ಕ್ರಿ.ಶ.ಸು. 17ನೇ ಶತಮಾನದ ಮರದಲ್ಲಿ ಕೆತ್ತಲ್ಪಟ್ಟ ಗೋವರ್ಧನ ಹಾಗೂ ಲಕ್ಷ್ಮೀ ಮೂರ್ತಿಗಳನ್ನು ಈ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ.

 

ಈ ಭಾಗದಲ್ಲಿ ದೊರೆತ ಅನೇಕ ದೇವಿಯರ ವಿಗ್ರಹಗಳು ಹಾಗೂ ಬೆಟಗೇರಿಯ ಕ್ರಿ.ಶ.ಸು 12 ನೇ ಶತಮಾನದ ಕಲಾತ್ಮಕವಾಗಿ ಕೆತ್ತಲಾದ ಸಪ್ತಮಾತೃಕೆಯರ ಶಿಲ್ಪಗಳು, ಧ್ಯಾನ ಮುದ್ರೆಯಲ್ಲಿ ಕುಳಿತ ಭಂಗಿಯಲ್ಲಿ ಇರುವ ದೇವಿ ಶಿಲ್ಪಗಳು ಈ ವಸ್ತುಸಂಗ್ರಹಾಲಯದ ವಿಶೇಷ ಆಕರ್ಷಣೆಗಳಾಗಿವೆ. ಇವುಗಳಿಂದ ಈ ಪ್ರಾಂತ್ಯದಲ್ಲಿ ಶಕ್ತಿಯ ಆರಾಧನೆಯು ಪ್ರಮುಖ ಪಾತ್ರ ಪಡೆದಿತ್ತೆಂಬುದ್ನು ತಿಳಿಯಬಹುದು.

 

ಶಾಸನಗಳು:

 

ಈ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಲಾದ ಶಾಸನಗಳಲ್ಲಿ ಕ್ರಿ.ಶ. 1007ರ ದಾನ ಚಿಂತಾಮಣಿ ಅತ್ತಿಮಬ್ಬೆಯು ಜೈನ ಬಸದಿ ಕಟ್ಟಿಸಿ, ದಾನ ನೀಡಿದ ಶಾಸನವು ಪ್ರಮುಖವಾಗಿದೆ.

 

ಕ್ರಿ.ಶ.1076-1125 ರಲ್ಲಿ ರಲ್ಲಿ ರಚಿತವಾದ ಶಾಸನವು ಕಲ್ಯಾಣ ಚಾಲುಕ್ಯ ತ್ರಿಭುವನ ಮಲ್ಲನ ಆಳ್ವಕೆಯನ್ನು ವಿವರಿಸುತ್ತದೆ. 

 

ಕ್ರಿ.ಶ. 1119ರ ಶಾಸನವನ್ನು ಹೊಂಬಳದ ಚಟ್ಟಪಾರ್ಯ ರಚಿಸಿದ್ದಾಗಿ, ಇದರಲ್ಲಿ ಚಟ್ಟದೇವರ ಷಷ್ಠಿಯ ನಿತ್ಯ ಪೂಜೆಗಾಗಿ ಗದ್ಯಾಣಗಳನ್ನು ದಾನ ನೀಡಿದವರ ವಿವರಗಳನ್ನು ಉಲ್ಲೇಖಿಸಲಾಗಿದೆ.

 

ಈ ವಸ್ತುಸಂಗ್ರಹಾಲಯದ ಸುತ್ತಲೂ ಮನಸೂರೆಗೊಳ್ಳುವಂತ ಸುಂದರವಾದ ಉದ್ಯಾನವನ ನಿರ್ಮಿಸಿ, ಮುಂಭಾಗದ ಆವರಣದಲ್ಲಿ ಆಕರ್ಶಕವಾದ ಪ್ರಾಚ್ಯವಸ್ತುಗಳನ್ನು ಪ್ರದರ್ಶಿಸಲಾಗಿದೆ.

 

ಇತ್ತೀಚಿನ ನವೀಕರಣ​ : 14-10-2020 04:13 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080