ಅಭಿಪ್ರಾಯ / ಸಲಹೆಗಳು

ಸರ್ಕಾರಿ ವಸ್ತುಸಂಗ್ರಹಾಲಯ ಚಿತ್ರದುರ್ಗ

ದಖ್ಖನ್ ಪ್ರಸ್ತಭೂಮಿಯಲ್ಲಿ ಉಗಮವಾಗಿರುವ ಕೃಷ್ಣಾ ನದಿಯ ದಕ್ಷಿಣ ಪಾರ್ಶ್ವದಲ್ಲಿ ಹಾಗೂ ಕರ್ನಾಟಕ ರಾಜ್ಯದ ಮದ್ಯಭಾಗದಲ್ಲಿರುವ ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ನೆಲೆಗಳಿಂದ ಮತ್ತು ವಿವಿಧ ಸ್ಮಾರಕಗಳ ಸಂಪತ್ತಿನಿಂದ ಕೂಡಿದೆ.  ಈ ಭೂ ಭಾಗವು ಇತಿಹಾಸಕಾರರಿಗೂ ಮತ್ತು ಸಂಶೋಧಕರಿಗೂ ಬಹು ಪ್ರಿಯವಾದ ಸ್ಥಳವಾಗಿದೆ.  ವಿಶ್ವದ ಅತ್ಯಂತ ಪ್ರಾಚೀನವಾದ ಈ ಪ್ರದೇಶದ ಶಿಲಾ ಪದರಗಳಲ್ಲಿ ಮುನ್ನೂರು ಕೋಟಿ ವರ್ಷಗಳ ಹಿಂದೆಯೇ ಜೀವಕಣಗಳ ಪಳಯುಳಿಕೆಗಳು ಸಿಕ್ಕಿರುವುದಾಗಿ ಭೂಗರ್ಭ ಶಾಸ್ತ್ರಜ್ಞರು ಬಹಿರಂಗಪಡಿಸಿದ್ದಾರೆ.  ಇಲ್ಲಿ ಇತಿಹಾಸ ಪೂರ್ವಕಾಲದಲ್ಲಿಯೇ ಮಾನವನು ವಾಸಿಸುತ್ತಿದ್ದನೆಂಬುದಕ್ಕೆ ಆಧಾರಗಳು ಸಿಕ್ಕಿವೆ. ಶಿಲಾಯುಗದಲ್ಲಿ ಗುಹೆಗಳಲ್ಲಿ ವಾಸಿಸುತ್ತಿದ್ದ ಮಾನವನು ಉಪಯೋಗಿಸುತ್ತಿದ್ದ ಕಲ್ಲಿನ ಮೊನಚಾದ ಆಯುಧಗಳು ಚಂದ್ರವಳ್ಳಿ ಮತ್ತು ಬ್ರಹ್ಮಗಿರಿಗಳಲ್ಲಿ ದೊರೆತಿವೆ.  ಇತಿಹಾಸ ಪೂರ್ವಕಾಲದಲ್ಲಿ ಹುಟ್ಟು ಬಂಡೆಗಳ ಮೇಲೆ ಇಲ್ಲಿನ ನಿವಾಸಿಗಳು ಚಿತ್ರಿಸಿದ ಹುಲಿ, ಕಾಡೆಮ್ಮೆ, ಜಿಂಕೆ ಮುಂತಾದ ಕಾಡುಪ್ರಾಣಿಗಳ ರೇಖಾ ಚಿತ್ರಗಳು ಕಂಡುಬಂದಿವೆ.

 

ಚಂದ್ರವಳ್ಳಿ ಮತ್ತು ಬ್ರಹ್ಮಗಿರಿಯ ಪ್ರಾಚೀನ ನಿವೇಶನಗಳಲ್ಲಿ ಕೈಗೊಂಡ ಉತ್ಖನನಗಳು ಕರ್ನಾಟಕದ ಇತಿಹಾಸದ ಮೇಲೆ ಬೆಳಕನ್ನು ಚೆಲ್ಲಿವೆ.  ಚಂದ್ರವಳ್ಳಿಯಲ್ಲಿ ದೊರೆತ ನಾಣ್ಯಗಳು, ಮಣ್ಣಿನ ಪಾತ್ರೆಗಳು, ಆಭರಣಗಳು, ಪ್ರಾಚೀನ ಕಟ್ಟಡಗಳ ಅವಶೇಷಗಳು ಎರಡು ಸಾವಿರ ವರ್ಷಗಳ ಪೂರ್ವದಲ್ಲಿಯೇ ಒಂದು ಸುಸಂಸ್ಕೃತ ಜೀವನ ಅಸ್ತಿತ್ವದಲ್ಲಿತ್ತೆಂದು ತಿಳಿದು ಬರುತ್ತದೆ.  ಇಲ್ಲಿನ ಉತ್ಖನನಗಳು ಜಗತ್ಪ್ರಸಿದ್ಧವಾಗಿ ಅಂತರರಾಷ್ಟ್ರೀಯ ಇತಿಹಾಸ ತಜ್ಞರ ಮತ್ತು ಸಂಶೋಧಕರ ಗಮನವನ್ನು ಸೆಳಿದಿವೆ.

 

ಮೊಳಕಾಲ್ಮೂರು ತಾಲೂಕಿನ ಸಿದ್ದಾಪುರ ಬಳಿ 1892ನೇ ವರ್ಷದಲ್ಲಿ ಮೈಸೂರು ರಾಜ್ಯದ ಶಾಸನ ಇಲಾಖೆಯ ಮುಖ್ಯಸ್ಥರಾಗಿದ್ದ ಶ್ರೀ ಬಿ.ಎಲ್. ರೈಸ್‍ರವರು ಅಶೋಕನ ಬಂಡೆ ಶಾಸನಗಳನ್ನು ಕಂಡುಹಿಡಿದರು.  ಮೌರ್ಯ ಸಾಮ್ರಾಜ್ಯವು ದಕ್ಷಿಣ ಭಾರತದಿಂದ ಪ್ರಾರಂಭಗೊಂಡು ಈ ಪ್ರದೇಶದವರೆಗೂ ಹರಡಿತ್ತೆಂಬ ಅಂಶವು ಪಾಶ್ಚಾತ್ಯ ದೇಶಗಳ ಇತಿಹಾಸಕಾರರನ್ನು ಚಕಿತಗೊಳಿಸಿತು.

 

ಚಿತ್ರದುರ್ಗ ಜಿಲ್ಲೆಯು ಶಿಲ್ಪಕಲೆಗಳಿಂದ ಕೂಡಿರುವ ಅತ್ಯಾಕರ್ಷಕ ದೇವಮಂದಿರಗಳನ್ನು ಹೊಂದಿವೆ.  ಪ್ರಾಚೀನ ಗುಹಾಂತರ ದೇವಾಲಯಗಳು ಚಿತ್ರದುರ್ಗದ ಬೆಟ್ಟದಲ್ಲಿವೆ.  ಪುರಾಣ ಪ್ರಸಿದ್ದವಾದ ಶಿವಮಂದಿರಗಳು ಅಲ್ಲಲ್ಲಿ ಸ್ಥಾಪಿತಗೊಂಡಿವೆ.  ಚಾಲುಕ್ಯ, ಹೊಯ್ಸಳ ಮತ್ತು ವಿಜಯನಗರ ಕಾಲದ ಶಿಲ್ಪಕಲೆಯು ದೇವಮಂದಿರಗಳಲ್ಲಿ ಕಂಗೊಳಿಸುತ್ತಿರುವುದಲ್ಲದೆ ಜೊತೆಗೆ ಐತಿಹಾಸಿಕ ಸಂಪತ್ತಿನಿಂದ ಕೂಡಿ ಕರ್ನಾಟಕ ಇತಿಹಾಸದ ಪುಟಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.

 

ಸ್ಥಳೀಯ ಪ್ರಾಚ್ಯವಸ್ತು ಸಂಗ್ರಹಾಲಯದ ಉದಯ:

 

ಚಿತ್ರದುರ್ಗ ಇತಿಹಾಸ ಸಂಶೋಧಕರಾಗಿದ್ದ ಹುಲ್ಲೂರ ಕೀರ್ತಿಶೇಷ ಶ್ರೀನಿವಾಸ ಜೋಯಿಸರು ಜಿಲ್ಲೆಯಲ್ಲಿ ದೊರೆತ ಐತಿಹಾಸಿಕ ವಸ್ತುಗಳನ್ನು ವ್ಯಾಸಂಗ ಮಾಡಿ ತಮ್ಮ ಸಂಶೋಧನೆ ಲೇಖನಗಳಿಂದಲೂ ಮತ್ತು ಉಪನ್ಯಾಸಗಳಿಂದಲೂ ಪ್ರಚುರಪಡಿಸಿರುವುದಲ್ಲದೆ ಜನತೆಯ ಮುಂದೆ 1928ರಲ್ಲಿ ಚಂದ್ರವಳ್ಳಿಯಲ್ಲಿ ಡಾ. ಎಂ.ಹೆಚ್. ಕೃಷ್ಣರವರ ನೇತೃತ್ವದಲ್ಲಿ ನಡೆದ ಭೂ ಸಂಶೋಧನೆಗೆ ಸ್ಥಳದ ಮಾಹಿತಿ ಮತ್ತು ಪೂರ್ವ ಇತಿಹಾಸವನ್ನು ಒದಗಿಸಿಕೊಟ್ಟ ಇವರ ಸೇವೆಯನ್ನು ಪ್ರಾಚ್ಯವಸ್ತು ಇಲಾಖೆ ವರದಿಗಳಲ್ಲಿ ಸ್ಮರಿಸಲಾಗಿದೆ.

 

ಶ್ರೀ ಹುಯಿಲಗೋಳು ಶ್ರೀನಿವಾಸ ಜೋಯಿಸರು ಕನ್ನಡಿಗರ ಭವ್ಯ ಪರಂಪರೆಯನ್ನು ಜನರ ಕಣ್ಮುಂದೆ ಯಾವಾಗಲೂ ಇರಿಸುವ ಕಾರ್ಯವು ತಮ್ಮ ಒಬ್ಬರಂದಲೇ ಸಾಧ್ಯವಿಲ್ಲವೆಂದು ಬಾವಿಸಿ ಜಿಲ್ಲೆಯ ಮುಖಂಡರೊಂದಿಗೆ ಚರ್ಚಿಸಿ ಒಂದು ಸ್ಥಳದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವುದು ಅವಶ್ಯಕವೆಂದು ಅರಿವು ಮಾಡಿಕೊಟ್ಟರು.  ಚಿತ್ರದುರ್ಗ ಜಿಲ್ಲಾ ಸಮಿತಿ ಮತ್ತು ಪುರಸಭೆಗಳಲ್ಲಿ ವಸ್ತುಸಂಗ್ರಹಾಲಯ ಪ್ರಾರಂಭಕ್ಕೆ ಒತ್ತಾಯಪಡಿಸಿ ನಿರ್ಣಯಗಳನ್ನು ಕೈಗೊಳ್ಳಲು ಕಾರಣರಾದರು.  ಈ ಶತಮಾನದ ಐವತ್ತರ ದಶಕದಲ್ಲಿ ಆಗಿನ ಮೈಸೂರು ಸರ್ಕಾರದ ಮಂತ್ರಿ ಮಾನ್ಯರಲ್ಲಿ ಬಿನ್ನಹಗಳನ್ನು ಅರ್ಪಿಸಿ ಸ್ಥಳೀಯ ವಸ್ತುಸಂಗ್ರಹಾಲಯ ಸ್ಥಾಪಿಸಲು ಆದೇಶ ಹೊರಡುವಂತೆ ಮಾಡಿದರು.   ಇದಕ್ಕೆ ಮನ್ನಣೆಯಿತ್ತು ಮೈಸೂರು ಸರ್ಕಾರವು ತನ್ನ ಆದೇಶ ನಂ. ಇ.10484-8-ಆರ್ಚ-8-47-6, ದಿನಾಂಕ: 21-03-1950ರಲ್ಲಿ ವಸ್ತುಸಂಗ್ರಹಾಲಯ ಆರಂಭಕ್ಕೆ ಅಜ್ಞೆ ಯಿತ್ತು, ಮೈಸೂರು ಪ್ರಾಚ್ಯವಸ್ತು ಮತ್ತು ಶಾಸನ ಇಲಾಖೆಗೆ ಅಧಿಕಾರ ವಹಿಸಿ ಕೊಟ್ಟರು.  ಕೂಡಲೇ ಇಲಾಖೆಯು ಕಾರ್ಯಪ್ರವೃತ್ತವಾಗಿ ಚಿತ್ರದುರ್ಗದ ಪ್ರಖ್ಯಾತ ಏಳುಸುತ್ತಿನ ಕೋಟೆಯ ಪೂರ್ವ ಮುಖದ ಮಹಾದ್ವಾರ ರಂಗಯ್ಯನ ಬಾಗಿಲಿನ ಎರಡು ಕೊಠಡಿಗಳಲ್ಲಿ ಸಂಗ್ರಹಾಲಯವನ್ನು ಸ್ಥಾಪಿಸಲು ಕ್ರಮ ಕೈಗೊಂಡಿತು.  ದಿನಾಂಕ: 16ನೇ ಏಪ್ರಿಲ್ 1951ರಲ್ಲಿ ಹುಲ್ಲೂರು ಶ್ರೀನಿವಾಸ ಜೋಯಿಸರರವರ ಆಸಕ್ತಿ ಮತ್ತು ಪರಿಶ್ರಮಕ್ಕೆ ಮನ್ನಣೆ ಕೊಟ್ಟು ಮೊದಲನೆಯ ಗೌರವ ಕ್ಯೂರೇಟರನ್ನಾಗಿ ನೇಮಿಸಲಾಯಿತು.  ಮೈಸೂರು ರಾಜ್ಯದ ಆಗಿನ ರಾಜ್ಯಪಾಲರಾಗಿದ್ದ ಕೀರ್ತಿಶೇಷ ಶ್ರೀ ಜಯಚಾಮರಾಜ ಒಡೆಯವರಿಂದ ಸ್ಥಳೀಯ ಪ್ರಾಚ್ಯವಸ್ತು ಸಂಗ್ರಹಾಲಯವೆಂಬ ಹೆಸರಿನಲ್ಲಿ ಉದ್ಘಾಟನಾ ಮಹೋತ್ಸವವು ನೆರವೇರಿಸಲ್ಪಟ್ಟಿತು.  ಈ ಸಂಗ್ರಹಾಲಯವು ಕೆಲಸಮಯದಲ್ಲಿ ಜನಾಕರ್ಷಣೆಯನ್ನ ಪಡೆಯಿತು.  ರಾಜ್ಯದಲ್ಲಿ ಸ್ಥಳೀಯ ಇತಿಹಾಸವನ್ನು ಪ್ರಚಾರಗೊಳಿಸಲು ನಾಂದಿಯಾಯಿತು

 

ಚಿತ್ರದುರ್ಗ ವಸ್ತು ಸಂಗ್ರಹಾಲಯದಲ್ಲಿರುವ ವಿಭಾಗಗಳು:

 

ಚಿತ್ರದುರ್ಗ ಪ್ರಾಚ್ಯವಸ್ತು ಸಂಗ್ರಹಾಲಯದ ಎರಡು ಕೊಠಡಿಗಳಲ್ಲಿ ವಿವಿಧ ಪ್ರಾಚ್ಯವಸ್ತುಗಳನ್ನು ಜೋಡಿಸಲಾಗಿದೆ. ವೀಕ್ಷಕರ ಅನುಕೂಲಕ್ಕಾಗಿ ಕೆಳಕಂಡಂತೆ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.

 

ಚಂದ್ರವಳ್ಳಿ ವಸ್ತುಗಳು:

 

ಚಂದ್ರವಳ್ಳಿ ಪ್ರದೇಶದಲ್ಲಿ ಕಂಡುಕೊಂಡ ಪ್ರಾಚೀನ ನಿವೇಶನದಲ್ಲಿ ಹಲವಾರು ಸಲ ಉತ್ಖನನಗಳು ನಡೆದವು.  ಮೈಸೂರು ಪ್ರಾಚ್ಯವಸ್ತು ಮತ್ತು ಶಾಸನ ಇಲಾಖೆಯ ಮುಖ್ಯಸ್ಥರಾಗಿದ್ದ ಕೀರ್ತಿಶೇಷ ಶ್ರೀ ಆರ್. ನರಸಿಂಹಚಾರ್, ಶ್ರೀ ಆರ್. ಶ್ಯಾಮಶಾಸ್ತ್ರಿ, ಡಾ. ಎಂ.ಹೆಚ್.ಕೃಷ್ಣ, ಡಾ. ಮಾರ್ಟಿಮಮ್ ವೀಲರ್, ಇತ್ತೀಚೆಗೆ 1978ರಲ್ಲಿ ಡಾ. ಮಿಶ್ರಾರವರು ಉತ್ಖನನವನ್ನು ನಡೆಸಿದರು.   ಇಲ್ಲಿ ದೊರೆತ ಪ್ರಾಚ್ಯವಸ್ತುಗಳಲ್ಲಿ ಶಾತವಾಹನರ ವಿವಿದ ವರ್ಣಮಯ ಮಣ್ಣಿನ ಪಾತ್ರೆಗಳು, ಬೇರೆ ಬೇರೆ ಮಣಿಗಳು, ಗುಂಡುಗಳು, ದಂತ ಮತ್ತು ಗಾಜಿನ ಬಳೆಗಳು, ಆಭರಣಗಳು, ಹಂಚುಗಳು ಮುಂತಾದ ವಸ್ತುಗಳು ದೊರೆತವು.

 

ಸಂಶೋಧನೆಯಲ್ಲಿ ಸಿಕ್ಕ ನಾಣ್ಯಗಳಲ್ಲಿ ಶಾತವಾಹನ, ರೋಮನ್ ಮತ್ತು ಚೈನಾ ದೇಶದ ನಾಣ್ಯಗಳು ಸಿಕ್ಕಿವೆ.  ಇತಿಹಾಸ ಪೂರ್ವಕಾಲದ ಸಂಸ್ಕೃತಿಯ ಪ್ರತೀತಿಗಳಾದ ನವಶಿಲಾಯುಗದ ಆಯುಧಗಳು, ಕಬ್ಬಿಣದ ಮೊಳೆಗಳು, ನೀರಿನ ಹೂಜಿಗಳು, ಚಿತ್ರಗಳಿಂದ ಕೂಡಿರುವ ಮಣ್ಣಿನ ಪಾತ್ರೆಗಳು, ಸಂಶೋಧನೆ ಕಾಲದಲ್ಲಿ ತೆಗೆಯಲಾದ ಛಾಯಾ ಚಿತ್ರಗಳು ಪ್ರದರ್ಶನದಲ್ಲಿವೆ.  ಪ್ರಾಚೀನ ಕಟ್ಟಡಕ್ಕೆ ಬಳಸುತ್ತಿದ್ದ ಕೆಂಪು ಇಟ್ಟಿಗೆಗಳನ್ನು ನೊಡಬಹುದು ಮತ್ತು ಉತ್ತಮ ಕಟ್ಟಡಗಳ ನಿರ್ಮಾಣ ಇದ್ದವೆಂಬುದು ಬೆಳಕಿಗೆ ಬಂದಿದೆ.  ಸ್ತ್ರೀಯರು ಅಕರ್ಷಕ ಆಭರಗಣಗಳನ್ನು ಧರಿಸಿ ಸುಸಂಸ್ಕೃತ ಜೀವನವನ್ನು ನಡೆಸುತ್ತಿದ್ದರೆಂಬ ಅಂಶಗಳು ಹೊರಬೀಳುತ್ತವೆ. 

 

ಬ್ರಹ್ಮಗಿರಿ:

 

ಮೊಳಕಾಲ್ಮೂರು ತಾಲೂಕಿನಲ್ಲಿರುವ ಬ್ರಹ್ಮಗಿರಿಯ ಪ್ರಾಚೀನ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದೆ.  ಈ ಸ್ಥಳದಲ್ಲಿ ಕೈಗೊಂಡ ಸಂಶೋಧನೆಯಲ್ಲಿ ದೊರೆತ ಶಿಲಾಯುಧಗಳನ್ನು ಮೃಣಾಯ ಪಾತ್ರೆಗಳನ್ನು ವಸ್ತು ಸಂಗ್ರಹಾಲಯದ ಪ್ರದರ್ಶನದಲ್ಲಿ ಜೋಡಿಸಲಾಗಿದೆ.  ಸಂಶೋದನೆ ಕಾಲದಲ್ಲಿ ತೆಗೆಯಲಾದ ಸಮಾಧಿಗಳ ವಿವಿಧ ಛಾಯಾ ಚಿತ್ರಗಳು ಎಷ್ಟೋ ಹೊಸ ವಿಷಯಗಳನ್ನು ಹೊರಚೆಲ್ಲುತ್ತವೆ.  ಈ ಪ್ರದೇಶವು ಉನ್ನತ ಸಂಸ್ಕೃತಿಯ ಕೇಂದ್ರವಾಗಿ ಪ್ರಾಚೀನ ಕಾಲದಲ್ಲಿ ಕಂಗೊಳಿಸತ್ತೆಂಬುದು ಒಂದು ಸೋಜಿಗದ ಸಂಗತಿ.

 

ಪಾಳೆಯಗಾರರ ವಿಭಾಗ:

 

ಚಿತ್ರದುರ್ಗದಲ್ಲಿ ಆಳಿದ ವೀರಾಧಿವೀರರೆಂದು ಪ್ರಖ್ಯಾತರಾದ ನಾಯಕರ ಕೆಲವು ಚಿತ್ರಗಳು, ಛಾಯಾಚಿತ್ರಗಳು ಇಲ್ಲಿನ ಮಹತ್ವದ ಅಕರ್ಷಣೆಯಾಗಿವೆ.  ತಿಮ್ಮಣ್ಣನಾಯಕನ ವೀರಗಲ್ಲಿನ ಚಿತ್ರ, ಬಿಚ್ಚುಗತ್ತಿ ಭರಮಣ್ಣ ನಾಯಕ, ಹಿರೇ ಮದಕರಿನಾಯಕನ ರೇಖಾಚಿತ್ರ ಮತ್ತು ಕಡೇ ರಾಜ ವೀರಮದಕರಿ ನಾಯಕನ ಚಿತ್ರಗಳು ಇವರ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತವೆ.  ಪಾಳೆಯಗಾರರ ಕಾಲದ ಚಿತ್ರದುರ್ಗವು ಯುದ್ದದ ಬೀಡಾಗಿತ್ತೆಂದು ನಾಯಕರು ಮತ್ತು ಸೈನಿಕರು ಉಪಯೋಗಿಸುತ್ತಿದ್ದ ತರತರಹದ ಆಯುಧಗಳ ಸಂಗ್ರಹವು ಈ ಭಾಗದಲ್ಲಿ ಪ್ರದರ್ಶಿಸಲಾಗಿದೆ.  ಈ ಸ್ಥಳದಲ್ಲಿ ತಯಾರಿಸಲಾಗುತ್ತಿದ್ದರೆಂಬ ವಸ್ತುಗಳಾದ ಸಿಡಿಗುಂಡುಗಳು, ಫಿರಂಗಿಗುಂಡುಗಳು, ಬಂದೂಕಿನ ಗುಂಡುಗಳು ವಿಸ್ಮಯವುಂಟು ಮಾಡುತ್ತವೆ.  ಈ ವಸ್ತುಗಳನ್ನು ತಯಾರಿಸುವ ಕಾರ್ಖಾನೆಗಳು ಚಿತ್ರದುರ್ಗದಲ್ಲಿದ್ದವೆಂಬುದಕ್ಕೆ ಇಂಬುಕೊಡುತ್ತವೆ.

 

ಚಿತ್ರದುರ್ಗವು ಪ್ರಸಿದ್ದ ಏಳುಸುತ್ತಿನ ಕೋಟೆಯ ವಿವಿಧ ಕೋನಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ.  ಆಯುಧಗಳ ಸಂಗ್ರಹದಲ್ಲಿ ನಾಯಕರು ರಕ್ಷಾ ಕವಚವಾಗಿ ಧರಿಸುತ್ತಿದ್ದ ಉಕ್ಕಿನ ಅಂಗಿ ಗಮನಾರ್ಹವಾದದು.  ಇದನ್ನು ಧರಿಸಿದ್ದ ವೀರರು ಶತೃಗಳ ಗುಂಡಿನ ಏಟಿಗೂ ಆಯುಧಗಳ ಹೊಡೆತಕ್ಕೂ ಹೆದರದೆ ರಣರಂಗದಲ್ಲಿ ನಿರ್ಭಯವಾಗಿ ಹೋರಾಡುತ್ತಿದ್ದರು.  ಚಂದ್ರನ ಆಕಾರವುಳ್ಳ ತುದಿಯ ಭಾಗದಲ್ಲಿ ಅಲಗನ್ನು ಹೊಂದಿರುವ ಚಂದ್ರಾಯುಧವನ್ನು ಉಪಯೋಗಿಸುತ್ತಿದ್ದರಂತೆ. ಗುಂಡುಗಳನ್ನು ಹಾರಿಸುತ್ತಿದ್ದ ಉದ್ದನೆಯ ನಲಿಕೆಯುಳ್ಳ ಕೋವಿಯು ಪ್ರದರ್ಶನದಲ್ಲಿದೆ.

 

ಹಸ್ತಪ್ರತಿಗಳು:

 

ಭಾರತೀಯರ ಕಾವ್ಯ, ಪುರಾಣ, ಶಾಸ್ತ್ರ, ಶಕುನ, ಜ್ಯೋತಿಷ್ಯ ಮುಂತಾದ ಸಾಹಿತ್ಯಗಳನ್ನೊಳಗೊಂಡ ತಾಳೆಗರಿಯ ಹಸ್ತ ಪ್ರತಿಗಳೂ ಪೂರ್ವಿಕರ ಜ್ಞಾನಭಂಡಾರಗಳಾಗಿವೆ.  ಇಂತಹ ಅನೇಕ ಹಸ್ತ ಪ್ರತಿಗಳನ್ನು ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಲಾಗಿದೆ.  ಪಂಡಿತರು, ಸಾಹಿತಿಗಳು, ಸಂಶೋಧಕರು ಮತ್ತು ಇತಿಹಾಸಕಾರರು ಇವುಗಳನ್ನು ಶೋಧಿಸಿ ಪರಂಪರಾಗತ ಜ್ಞಾನವನ್ನು ಹೊರಗೆಡವಲು ಅವಕಾಶ ಮಾಡಿಕೊಟ್ಟಿದ್ದಂತೆ ಭಾಸವಾಗುತ್ತದೆ. ಗಾಯತ್ರಿಮಂತ್ರ, ಪಂಚತಂತ್ರ, ನೀಲಕಂದಸ್ತುತಿ, ಬಾಲಗ್ರಹ ಮತ್ತು ಭಾರತ ರಾಮಾಯಣ ಕಾವ್ಯಗಳು ಇವೆ.

 

ಶಿಲ್ಪಗಳು:

 

ಚಿತ್ರದುರ್ಗ ಜಿಲ್ಲೆಯ ಅನೇಕ ಭಾಗಗಳಲ್ಲಿ ಅನಾಥವಾಗಿ ಬಿದ್ದಿದ್ದ ಹಲವು ಶಿಲ್ಪಗಳನ್ನು ತಂದು ಸಂಗ್ರಹಾಲಯದ ನೆಲೆಗಟ್ಟಿನ ಮೇಲೆ ಇಡಲಾಗಿದೆ.  ಹೊಯ್ಸಳ, ವಿಜಯನಗರ ಮತ್ತು ಪಾಳೆಯಗಾರರ ಕಾಲದ  ಕಲಾಕೃತಿಗಳು ಇವುಗಳಲ್ಲಿದೆ.  ಪದ್ಮಾಸನದಲ್ಲಿ ಕುಳಿತಿರುವ ಜೈನ ವಿಗ್ರಹವು ಭವ್ಯವಾಗಿದೆ.  ಇದು ಹೊಯ್ಸಳರ ಪೂರ್ವಕಾಲದ್ದದೆಂದು ಊಹಿಸಲಾಗಿದೆ.  ವಿಷ್ಣು, ಕಾಳಿ, ಸಪ್ತ ಮಾತೃಕೆಯರು, ವೀರಭದ್ರ ಮುಂತಾದ ಶಿಲ್ಪಗಳಿವೆ.  ವಿಜಯನಗರ ಕಾಲದ ಭಕ್ತ, ದ್ವಾರಪಾಲ ನರ್ತಕಿ ಇತ್ಯಾದಿಗಳನ್ನು ಸಂಗ್ರಹಿಸಲಾಗಿದೆ.

 

ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು:

 

ಕರ್ನಾಟಕ ರಾಜ್ಯದಲ್ಲಿ ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು ಹೇರಳವಾಗಿವೆ.  ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹ ಶಿಲ್ಪಗಳನ್ನು ಹಳ್ಳಿ ಹಳ್ಳಿಗಳಲ್ಲಿ ಕಾಣಬಹುದು.  ಶತೃಗಳೊಡನೆ ಹೋರಾಡಿ ಹಳ್ಳಿಯನ್ನು ರಕ್ಷಿಸುವುದಕ್ಕೆ ಗೋಮಂದೆಯನ್ನು ಕಾಪಾಡುವುದಕ್ಕೆ ಕಳ್ಳರನ್ನು ಎದುರಿಸಿ ಹೋರಾಡುವಾಗ ಜೀವತೆತ್ತ ವೀರರ ಸ್ಮರಣಾರ್ಥವಾಗಿ ನಿಲ್ಲಿಸಿದ ವೀರಗಲ್ಲುಗಳು ಇವಾಗಿವೆ.

 

ಗಂಡನ ಮರಣಾನಂತರ ಚಿತೆಯಲ್ಲಿ ಪ್ರಾಣತ್ಯಾಗ ಮಾಡಿರುವ ವೀರ ಮಹಿಳೆಯರ ನೆನಪಿಗಾಗಿ ನಿಲ್ಲಿಸಿದ ಕಲ್ಲುಗಳಿಗೆ ಮಾಸ್ತಿಕಲ್ಲುಗಳೆಂದು ಹೆಸರು.

 

ನೇರಲಗೊಂದಿ ವೀರಗಲ್ಲು :

 

ಸುಮಾರು 14-15ನೇ ಶತಮಾನಕ್ಕೆ ಸೇರಿದ ಈ ಶಿಲ್ಪದಲ್ಲಿ ಅಶ್ವಾರೂಢನಾದ ವೀರನು ಮತ್ತು ಈತನ ಪತ್ನಿಯರು ಇದ್ದಾರೆ.  ಹಿಂಭಾಗದಲ್ಲಿ ಛತ್ರಿಯನ್ನು ಹಿಡಿದ ಸೇವಕ ಮತ್ತು ಮುಂಭಾಗದಲ್ಲಿ ಒಬ್ಬ ಯುವಕನ ಚಿತ್ರವಿದೆ.

 

ಇತ್ತೀಚಿನ ನವೀಕರಣ​ : 14-10-2020 04:41 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080