ಅಭಿಪ್ರಾಯ / ಸಲಹೆಗಳು

ಶಿವಪ್ಪನಾಯಕ ಅರಮನೆ ಶಿವಮೊಗ್ಗ

ಮಲೆನಾಡಿಗೆ ಹೆರುವಾಸಿಯಾಗಿರುವ ಸಹ್ಯಾದ್ರಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ ರಾಷ್ಟೀಯ ಹೆದ್ದಾರಿ ಭದ್ರಾವತಿಯ ಮುಖ್ಯ ರಸ್ತೆಯ ಸಮೀಪದಲ್ಲಿ ಹಾದು ಹೋಗುವ ಕೋಟೆ ಮುಖ್ಯ ರಸ್ತೆಯ ಸಮೀಪದಲ್ಲಿ ಹರಿಯುವ ತುಂಗಾನದಿಯ ಎಡದಂಡೆಯ ಮೇಲೆ ಇರುವ ಅರಮನೆಯೇ ಶಿವಪ್ಪನಾಯಕ ಅರಮನೆ, ಈ ಅರಮನೆಯು ಸುಂದರವಾದ ಮರದ ಕೆತ್ತನೆಯಿಂದ ರೂಪುಗೊಂಡಿದೆ. ಈ ಅರಮನೆಯು ಸುಮಾರು 508 ವರ್ಷ ಪ್ರಾಚೀನವೆಂದು ತಿಳಿದು ಬರುತ್ತದೆ, ಈ ಅರಮನೆಯ ಕಟ್ಟಡವು ಸುಮಾರು 10 ಮೀಟರ್ ಎತ್ತರ, 30 ಮೀಟರ್ ಉದ್ದ ಹಾಗೂ 7 ಮೀಟರ್ ಅಗಲವಿದೆ. ಪೂರ್ವಾಭಿಮುಖವಾಗಿರುವ ಈ ಅರಮನೆಯ ಮುಂಭಾಗದಲ್ಲಿ 8 ಮೀಟರ್ ಅಗಲದ ಸಭಾಂಗಣವಿದೆ.  ಈ ಸಭಾಂಗಣದಲ್ಲಿ ಹೂಗಳ ಕುಸುರಿ ಕೆತ್ತನೆಯಿಂದ ಅಲಂಕೃತವಾದ 4 ಕಂಬಗಳಿವೆ. ಮರದ ಸ್ಥಂಭಗಳಿಂದ ನಿರ್ಮಿತವಾದ ಇಳಿಜಾರು ಕೈ ಹೆಂಚಿನಿಂದ ನಿರ್ಮಿಸಿರುವ ಈ ಭವ್ಯ ಸ್ಮಾರಕವು “ಶಿವಪ್ಪ ನಾಯಕ ಅರಮನೆ” ಎಂದು ಸ್ಥಳೀಯ ಪ್ರತೀತಿ.  ಇದು 17 ನೇ ಶತಮಾನದ ಮಧ್ಯಭಾಗದಿಂದ ಅಸ್ಥಿತ್ವದಲ್ಲಿದೆ. ಬಹುಶಃ ಇದು ಕೆಳದಿ ರಾಜವಂಶದ ಪ್ರಬಲ ದೊರೆ ವೆಂಕಟಪ್ಪ ನಾಯಕ (ಕ್ರಿ. ಶ. 1590 – 1629) ನಿಂದ ಕಟ್ಟಿಸಲ್ಪಟ್ಟಿರಬಹುದು. ಇದನ್ನು ಈ ವಂಶದ ಅತ್ಯಂತ ಸುಪ್ರಸಿದ್ಧ ಅರಸು ಶಿವಪ್ಪ ನಾಯಕನ ಕಾಲದಲ್ಲಿಯೂ ಮತ್ತು 19 ನೇ ಶತಮಾನದ ಆದಿ ಭಾಗದಲ್ಲಿಯೂ ಅಲ್ಪ ಸ್ವಲ್ಪ ಬದಲಾವಣೆಗಳಿಂದ ಜೀರ್ಣೊದ್ಧಾರ ಮಾಡಲಾಯಿತು. 20ನೇ ಶತಮಾನದ ಆದಿ ಭಾಗದಲ್ಲಿ ಇದರ ಹಿಂಬದಿಗೆ ಒಂದು ಚೌಕ ಕೋನದ ಕೈಸಾಲೆಯನ್ನು ಸೇರಿಸಲಾಯಿತು.

 

ಈ ಅರಮನೆಯನ್ನು (30.ಉ x 15.ಅ x 09.5 ಎ. ಮೀ) ಸುಮಾರು 0.75 ಮೀ ಎತ್ತರದ ಅದಿಷ್ಠಾನದ ಮೇಲೆ ಕಟ್ಟಲಾಗಿದೆ, ಇದರಲ್ಲಿ ವಿಶಾಲವಾದ ಸಭಾಂಗಣವಿದೆ. ಇದಕ್ಕೆ ಹೋಗಲು ಮುಂಭಾಗದಲ್ಲಿ ಸಮನಾಂತರದಲ್ಲಿ 5 ಇಳಿಜಾರುಗಳಿವೆ. ಮುಂಬದಿಯು ತೆರೆದಿದ್ದು,  ಸಮಾನಂತರದಲ್ಲಿ ಎತ್ತರ ಕಂಬಗಳಿವೆ. ಹಿಂಭಾಗದ ಎರಡು ಮೂಲೆಗಳಲ್ಲಿಯೂ ಒಂದರ ಮೇಲೆ ಒಂದರಂತೆ ಎರಡೆರಡು ಕೊಠಡಿಗಳಿವೆ. ಈ ಕೊಠಡಿಗಳ ಅಂತರದಲ್ಲಿ ತೆರೆದ ಅಟ್ಟವಿದೆ. ಮಧ್ಯದಲ್ಲಿ  ಇದು ಮುಂಚಾಚಿದೆ. ಇದಕ್ಕೆ ಏರಿ ಹೋಗಲು ಮುಂಭಾಗದ ಸಭಾಂಗಣದಿಂದ ಮೆಟ್ಟಿಲುಗಳಿವೆ.  ಈ ಅರಮನೆಯು ಮೂಲತಃ ಇನ್ನು ದೊಡ್ಡದಿದ್ದು, ಸುತ್ತಲೂ ಹಾಳುಬಿದ್ದ ಮಣ್ಣನ್ನು ತೆಗೆಸುವಾಗ ಇದರ ವಾಯುವ್ಯದ ಬದಿಯಲ್ಲಿ ಅರಮನೆಯ ಒಂದು ಭಾಗವು ಕಾಣಿಸಿಕೊಂಡಿತು. ಇದರಲ್ಲಿ ಎರಡು ವಿಶಾಲವಾದ ಎರಡು ಸಮಾನಂತರ ಪಡಸಾಲೆಗಳು (9-50 x 1-50ಮೀ) ಮತ್ತು ವಿಸ್ತಾರವಾದ ಒಂದು ಚೌಕೋನದ ಸಭಾಂಗಣವು ಇದೆ.   ಬಹು ಎತ್ತರದ ಮರದ ಸ್ಥಂಭಗಳ ಬುಡದಲ್ಲಿ ಭದ್ರವಾದ ಚೌಕೋನದ ಪೀಠದ ಮೇಲಕ್ಕೆ ಸಪೊರವಾಗುತ್ತ ಹೋಗಿರುವ ಪಟ್ಟಿ ಪಟ್ಟಿಕೆಯ ಕಾಂಡವು ಇದರ ಮೇಲ್ಭಾಗದಲ್ಲಿ ಅರಳಿದ ಕಮಲದ ಹೂವಿನ ಹಾಗೂ ಹೂ ಬಳ್ಳಿಯ. ಪಟ್ಟಿಕೆ ಕೆತ್ತನೆಗಳು. ವಿಜಯನಗರದ ಶೈಲಿಯ ಅರಳಿದ ಪುಷ್ಪಾ ಕೃತಿಯ ಭೋದಿಗೆಗಳು ಇವೆ.  ಈ ಕಂಬಗಳಲ್ಲಿ  ಕೆತ್ತಲಾಗಿರುವ ಕುಸುರಿ ವರ್ಣದ ಕೆತ್ತನೆಗಳು ವಿಜಯನಗರ ಅನಂತರ ಕಾಲದ ಸ್ಥಳೀಯ ಶೈಲಿಯಲ್ಲಿವೆ. ಅಟ್ಟದ ಮೇಲಿನ ಸಾಲಿನ ಕಂಬಗಳ ಮಧ್ಯದಲ್ಲಿ ಸಣ್ಣ ಕಮಾನಿನ ಮಾಲೆಯ ಕಮಾನುಗಳಿವೆ. ಇವು ಭಾರತೀಯ ಇಸ್ಲಾಂ ಶೈಲಿಯಲ್ಲಿವೆ. ಮುಂಚಾಚಿದ ಅಟ್ಟವು ಅರಸರುಗಳ ಕೆಲವು ವಿಶೇಷ ಸಂದರ್ಭಗಳಲ್ಲಿ ಅರಮನೆಯ ಮುಂದೆ ಸೇರಿದ ಪ್ರಜೆಗಳಿಗೆ ಗೌರವ ದರ್ಶವನ್ನೀಯಲು ಇರಬಹುದು. ಮುಂಭಾಗದ ಸಭಾಂಗಣದಲ್ಲಿ ನೆಲದ ಮೇಲೆ ಸಮಾನಾಂತರದಲ್ಲಿ ಸರಳ ಆಕೃತಿಯಲ್ಲಿ ಇರುವ ಎಂಟು ಕಲ್ಲು ಫಲಕಗಳಿವೆ. ಇವು ಅರಮನೆಯ ರಕ್ಷಕದಳದವರು ನಿಲ್ಲುವ ಸ್ಥಾನಗಳು.

 

ಈ ಅರಮನೆ ಇದುವವರೆಗೂ ಕರ್ನಾಟಕದಲ್ಲಿ ತಿಳಿದಿರುವ ಅತ್ಯಂತ ಪ್ರಾಚೀನ ಕೆಲವೇ ಅರಮನೆಗಳಲ್ಲಿ ಒಂದು ಬಹು ಮಟ್ಟಿಗೆ ಅಸ್ಪಷ್ಟವಾದ ಭಾರತೀಯ ನಗರಿ ವಾಸ್ತುಶಿಲ್ಪ ಇತಿಹಾಸದಲ್ಲಿಯೇ ಈ ಅರಮನೆಯು ಒಂದು ವಿಶಿಷ್ಠ ಸ್ಥಾನಕ್ಕೆ ಅರ್ಹವಾಗಿದೆ. ಈ ಶಿವಪ್ಪನಾಯಕ ಅರಮನೆಯು 1984 ರ ಫೆಬ್ರವರಿವರೆಗೂ ಆರಣ್ಯ ಇಲಾಖೆಯ ವಶದಲ್ಲಿತ್ತು. ತದನಂತರ ರಾಜ್ಯ ಸರ್ಕಾರವು 1984 ರ ಫೆಬ್ರವರಿ 1 ರಂದು ಆರಣ್ಯ ಇಲಾಖೆಯ ವಶದಲ್ಲಿದ್ದ ಶಿವಪ್ಪನಾಯಕ ಅರಮನೆಯನ್ನು ನಮ್ಮ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರ ಮಾಡಿತು, ಶಿವಪ್ಪನಾಯಕ ಅರಮನೆಯು ನಮ್ಮ ಇಲಾಖೆಯ ಆಸ್ತಿತ್ವಕ್ಕೆ ಬಂದ ನಂತರ ಈ ಶಿವಪ್ಪನಾಯಕ ಅರಮನೆಯನ್ನು ನವೀಕರಿಸಲು ಡಾ. ಅ. ಸುಂದರ್‍ರವರನ್ನು ನೇಮಿಸಲಾಯಿತು. ಶಿವಪ್ಪನಾಯಕನ ಅರಮನೆಯ ಪ್ರಾಚ್ಯವಸ್ತು ಸಂಗ್ರಹಾಲಯವನ್ನು 1988 ರಲ್ಲಿ ಅಂದಿನ ಶಿವಮೊಗ್ಗದ ಜಿಲ್ಲಾಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸಿರುವ  ಜಿಲ್ಲಾಧಿಕಾರಿಯಾದ ಶ್ರೀ ಹೆಚ್. ಎಲ್. ನಾಗೇಗೌಡ. (ಕೆ.ಎ.ಎಸ್) ಇವರು ದಿನಾಂಕ, 16-12-1988 ರಂದು ಶಿವಪ್ಪನಾಯಕ ಅರಮನೆಯ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿರುವರು. ಈ ಶಿವಪ್ಪನಾಯಕ ಅರಮನೆಯನ್ನು ಕರ್ನಾಟಕ ರಾಜ್ಯ ಪರಾತತ್ವ ಇಲಾಖೆಯು ಕನಾಟಕ ಸರ್ಕಾರದ ಶಿವಪ್ಪನಾಯಕನ ಸರ್ಕಾರಿ ಪ್ರಾಚ್ಯವಸ್ತು, ಸಂಗ್ರಹಾಲಯವನ್ನಾಗಿ ಮಾರ್ಪಾಡಿಸಿದರು. ಅನಂತರ ಡಾ. ಅ. ಸುಂದರ್‍ರವರು ಶಿವಪ್ಪನಾಯಕ ಅರಮನೆಯ ಉಸ್ತುವಾರಿಯಾಗಿ ನೇಮಿಸಲಾದ ಅಧಿಕಾರಿಯಾದ ಶ್ರೀ, ನಂಜುಂಡಸ್ವಾಮಿ, ಸಹಾಯಕ ಕ್ಯೂರೇಟರ್, ಇವರು ಕೆಳದಿ ವಸ್ತುಸಂಗ್ರಹಾಲಯದ ಸರ್ವೇಕ್ಷಣಾಧಿಕಾರಿ ಮತ್ತು ಇತಿಹಾಸಗಾರರಾದ ಪ್ರೊಫೆಸರ್ ಡಾ. ಗುಂಡಾ ಜೋಯಿಸ್‍ರವರು ಹಾಗೂ ಶಿವಮೊಗ್ಗದ ಉಪನ್ಯಾಸಕರಾದ ಡಾ. ಜಿ. ಸಾಮಕ್‍ರವರು ಶಿವಮೊಗ್ಗ ಜಿಲ್ಲೆಯ ಮೂಲೆ ಮೂಲೆಗಳಿಂದ ಸಂಗ್ರಹಿಸಿ ಕೊಟ್ಟ ಪ್ರಾಚ್ಯವಸ್ತುಗಳು, ಇಲಾಖೆಯ ಕ್ಷೇತ್ರಕಾರ್ಯದಲ್ಲಿ ಸಂಗ್ರಹಿಸಿದ ಪ್ರಾಚ್ಯವಸ್ತುಗಳು, ಆಯುಧಗಳು, ತಾಳೆಗರಿಗಳು, ಎಂ. ಶೇಷಾದ್ರಿ ಹಾಗೂ ಎಸ್.ಆರ್.ರಾವ್‍ರವರು ದಾನವಾಗಿ ನೀಡಿದ ಮುದ್ರಿಕೆಗಳು, ಪ್ರಾಚ್ಯವಸ್ತುಗಳು, ಮತ್ತು ಪ್ರಖ್ಯಾತ ಶಿಲ್ಪಿಗಾರರಾದ ದಿ, ಮುಂಡಗೊಡು ಹಿರಿಣ್ಯಪ್ಪ. ಗುಡಿಕಾರ ಇವರು ದಾನವಾಗಿ ನೀಡಿದ ಗಂಧದ ಕುಸುರಿ ಕೆತ್ತನೆಯ ಛಾಯಾ ಚಿತ್ರಣಗಳನ್ನು ಪ್ರದರ್ಶಿಸಲಾಗಿದೆ.

 

ವಸ್ತುಸಂಗ್ರಹಾಲಯ ಆವರಣ :

 

ಈ ವಸ್ತುಸಂಗ್ರಹಾಲಯದ ಆವರಣವನ್ನು ನೋಡಿದರೆ ಬಯಲು ವಸ್ತುಸಂಗ್ರಹಾಲಯವನ್ನು ನೋಡಿದಂತೆ ನೋಡುಗರಿಗೆ ಭಾಸವಾಗುತ್ತದೆ, ಅರಮನೆ ದ್ವಾರದಲ್ಲಿ ಪ್ರವೇಶ ಆಗುತ್ತಿದ್ದಂತೆ ವಸ್ತುಸಂಗ್ರಹಾಲಯದ ಮುಂಭಾದಲ್ಲಿ ಕ್ರಿ.ಶ 12 ನೇ ಶತಮಾನದ ಗುರುಪುರ ಹಾಗೂ ಕಲ್ಲೂರು ಗುಡ್ಡದ ಶಾಸನಗಳು, 11 ನೇ ಶತಮಾನದ ಬೇಗೂರಿನ ದ್ವಾರಪಾಲಿಕೆ, ಕ್ರಿ.ಶ. 12 ನೇ ಶತಮಾನದ ಬಸವನಹಾಲಿನ ಸರಸ್ವತಿ, ಕ್ರಿ.ಶ. 15 ನೇ ಶತಮಾನದ ನಗರದ ನಂದಿಯು ನಯನ ಮನಮೋಹಕವಾಗಿದೆ. ಕ್ರಿ.ಶ. 12 ನೇ ಶತಮಾನದ ಬಸವಕಲ್ಲಿನ ಚಾಮರಧಾರಿಣಿ, ಕ್ರಿ.ಶ. 13ನೇ ಶತಮಾವದ ದನಾಯಕನಪುರದ ವಿಷ್ಣು, ಕ್ರಿ.ಶ. 12 ನೇ ಶತಮಾನದ ನಗರದ ಉಗ್ರನರಸಿಂಹ, ಕ್ರಿ.ಶ. 16ನೇ ಶತಮಾನದ ನಗರದ ಸಿಂಹ, ಕ್ರಿ.ಶ. 16 ನೇ ಶತಮಾನದ ಶಿವಮೊಗ್ಗದ ಭೈರವ, ಮುಂತಾದ ಪ್ರಾಚ್ಯವಸ್ತುಗಳನ್ನು ಪ್ರದರ್ಶಿಸಲಾಗಿದೆ.

 

ಅರಮನೆಯ ಮುಂಭಾಗದಲ್ಲಿ :

 

ಅರಮನೆಯ ಮುಂದೆ ಕ್ರಿ.ಶ. 18 ನೇ ಶತಮಾನದ ನಗರದ ಕಬ್ಬಿಣದ ಘಂಟೆ, ಶಿವಮೊಗ್ಗದ ಪಿರಂಗಿ, ಸೊರಬದ ಮದ್ದು ಗುಂಡನ್ನು  ಕಾಣಬಹುದಾಗಿದೆ.  ಅರಮನೆಯನ್ನು ಪ್ರವೇಶಿಸಲು ಮೊದಲು ಸಮಾನಂತರವಾಗಿ ಇಳಿಜಾರಾದ 5 ಮೆಟ್ಟಿಲುಗಳಿವೆ. ಬೃಹತ್ತಾಕಾರ ಎತ್ತರವಾದ ಮರದ ದಿಂಬಣದ 6 ಕಂಬಗಳಿವೆ, ಅರಮನೆಯ ಮುಂಭಾಗದ ಸಭಾಂಗಣದಲ್ಲಿ ನೆಲದ ಮೇಲೆ ಸಮಾನಾಂತರದಲ್ಲಿ ಸರಳ ಆಕೃತಿಯಲ್ಲಿ ಇರುವ 8 ಕಲ್ಲು ಫಲಕಗಳಿವೆ. ಅರಮನೆಯ ಮೇಲಿನ ಅಂತಸ್ತಿನಲ್ಲಿ 2 ಮೆಟ್ಟಿಲುಗಳಿವೆ. ಅರಮನೆಯ ಅಂತಸ್ತಿನ ಮೇಲ್ಭಾಗದಲ್ಲಿ ಅರಳಿದ ಕಮಲದ ಹೂವಿನ ಹಾಗೂ ಹೂ ಬಳ್ಳಿಯ ಪಟ್ಟಿಕೆ, ಕೆತ್ತನೆಗಳ ಚಿತ್ತಾರವು ನಯನ ಮನಮೋಹಕವಾಗಿದ್ದು, ನೋಡುಗರ ಕಣ್ಮನ ಸೆಳೆಯುವಂತಿವೆ.

 

ಅರಮನೆಯ ಪಕ್ಕದಲ್ಲಿ :

 

ಅರಮನೆಯ ಪಕ್ಕದಲ್ಲಿ ಕ್ರಿ.ಶ. 18 ನೇ ಶತಮಾನದ ಶಿವಮೊಗ್ಗದ ವೇಣುಗೋಪಾಲ ವಿಗ್ರಹವು ತುಂಬಾ ಮೋಹಕವಾಗಿ ವರ್ಣರಂಜಿತವಾಗಿದೆ ಮತ್ತು ಅರಮನೆಯ ಉದ್ಯಾನವನದ ಮಧ್ಯದಲ್ಲಿ ಕ್ರಿ.ಶ 16 ನೇ ಶತಮಾನದ ಬೇಗದಾಳಿಯ ಮಹಾಸತಿ. ಕ್ರಿ.ಶ. 16 ನೇ ಶತಮಾನದ ಶೃಂಗಾರದಿಂದ ಕೂಡಿದ ಭದ್ರಾವತಿಯ ಮಹಾಸತಿ, ಕ್ರಿ.ಶ. 16 ನೇ ಶತಮಾನದ ಬೇಗದಾಳಿಯ ವೀರಗಲ್ಲು, ಕ್ರಿ.ಶ. 16 ನೇ ಶತಮಾನದ ನಗರದ ಆಂಜನೇಯ, ಕ್ರಿ.ಶ. 15 ನೇ ಶತಮಾನದ ಬಳ್ಳಿಗಾವೆಯ ನಂದಿ, ಕ್ರಿ.ಶ. 14 ನೇ ಶತಮಾನದ ಅಗರದಳ್ಳಿಯ ಸೂರ್ಯ, ಕ್ರಿ.ಶ. 18 ನೇ ಶತಮಾನದ ಚೀಲೂರಿನ ಕಾಳಿ ಮುಂತಾದ ಪ್ರಾಚ್ಯವಸ್ತುಗಳನ್ನು ಪ್ರದರ್ಶಿಸಲಾಗಿದೆ.

 

ಅರಮನೆಯ ಹಿಂಭಾಗದಲ್ಲಿ :

 

ಅರಮನೆಯ ಹಿಂಭಾಗದಲ್ಲಿ ಕ್ರಿ.ಶ. 13 ನೇ ಶತಮಾನದ ಕಲ್ಮನೆ ಗಣಪತಿ, ಕ್ರಿ.ಶ. 16 ನೇ ಶತಮಾನದ ಹರಕೆರೆಯ ಜಡೆಗಣಪತಿ ಇದು ಕರ್ನಾಟಕದಲ್ಲಿ ಮಾತ್ರ ಇರುವುದೆಂಬುದು ಸ್ಥಳೀಯರ ಪ್ರತೀತಿ,  ಕ್ರಿ.ಶ. 16 ನೇ ಶತಮಾನದ ಬಿಸಲಮನೆ ಅರಣ್ಯದ ಜರ್ನಾಧನ, ಕ್ರಿ.ಶ. 16 ನೇ ಶತಮಾನದ ನಗರದ ಮಹಾಸತಿ, ಕ್ರಿ.ಶ. 18 ನೇ ಶತಮಾನದ ವರಾಹಿ ಪ್ರಾಜೆಕ್ಟ್ ನ ಮಹಾಸತಿ, ಕ್ರಿ.ಶ 13ನೇ ಶತಮಾನದ ಸಾಗರದ ಕೃಷ್ಣ, ಕ್ರಿ.ಶ. 14 ನೇ ಶತಮಾನದ ತವನಂದಿ ಕೋಟೆಯ ನಿಷಿಧಿಕಲ್ಲು, ಕ್ರಿ.ಶ. 15 ನೇ ಶತಮಾನದ ಯಲಗಳಲೆಯ ರತಿಮನ್ಮಥ, ಕ್ರಿ.ಶ. 15 ನೇ ಶತಮಾನದ ಬಳ್ಳಿಗಾವೆಯ ನಂದಿ. ಕ್ರಿ.ಶ. 16 ನೇ ಶತಮಾನದ ಸಾಗರದ ಗರುಡ, ಕ್ರಿ.ಶ. 16 ನೇ ಶತಮಾನದ ಆನಂದಪುರದ ಮಹಾಸತಿಕಲ್ಲು, ಕ್ರಿ.ಶ. 16 ನೇ ಶತಮಾನದ ಬೇಗದಾಳಿಯ ಮಹಾಸತಿಕಲ್ಲು. ಕ್ರಿ.ಶ. 17 ನೇ ಶತಮಾನದ ಬಳ್ಳಿಗಾವೆಯ ಕಂಬದ ಪೀಠ, ಕ್ರಿ.ಶ. 17 ನೇ ಶತಮಾನದ ಹೊಳೆಬೆವನಳ್ಳಿಯ ನಂದಿ, ಕ್ರಿ.ಶ. 17 ನೇ ಶತಮಾನದ ಉಂಬಳೆ ಬೈಲಿನ ದೇವಿ. ಕ್ರಿ.ಶ. 12 ನೇ ಶತಮಾನದ ಸಾಲೂರಿನ ಧರಣೇಂದ್ರ ಯಕ್ಷಿ, ಕ್ರಿ.ಶ. 12 ನೇ ಶತಮಾನದ ಇಸ್ಲಾಪುರದ ತೀರ್ಥಂಕರ ಜೈನ ವಿಗ್ರಹಗಳು ಮುಂತಾದ ಪ್ರಾಚ್ಯವಸ್ತುಗಳನ್ನು ಪ್ರದರ್ಶಿಸಲಾಗಿದೆ.

 

ವಸ್ತುಸಂಗ್ರಹಾಲಯದ ಆಯುಧ ಗ್ಯಾಲರಿ :

 

ಕೆಳದಿ ನಾಯಕರು ಯುದ್ಧದ ಸಂದರ್ಭದಲ್ಲಿ ಬಳಸಿದ ತ್ಯಾವನಂದೂರಿನಲ್ಲಿ ದೊರೆತಿರುವ ಬಿಲ್ಲು ಬಾಣ, ತೀರ್ಥಹಳ್ಳಿಯ ಪರುಶರಾಮ ಖಡ್ಗ, ಚಂದ್ರಾಯುಧ, ಕಠಾರಿ, ಈಟಿ, ಕೊಡಲಿ, ಕುಡುಗೋಲು, ಕಬ್ಬಿಣದ ಖಡ್ಗ, ಕತ್ತಿಗಳು, ಬಂದೂಕು, ಪಿಸ್ತೂಲ್‍ಗಳು ನೋಡುಗರಿಗೆ ಅಧ್ಬುತವಾಗಿ ಕಂಗೊಳಿಸುತ್ತವೆ ಹಾಗೂ 120 ಕೆ.ಜಿ. ತೂಕದ ಸೀಸದ ಗೋಲಾಕೃತಿಯ ಆಕಾರವಾಗಿರುವ ಸೀಸದ ಗುಂಡುಕಲ್ಲು ಮುಂತಾದ ಪ್ರಾಚ್ಯವಸ್ತುಗಳನ್ನು ಪ್ರದರ್ಶಿಸಲಾಗಿದೆ.

 

ವಸ್ತುಸಂಗ್ರಹಾಲಯದ ಛಾಯಾಚಿತ್ರಣ ಗ್ಯಾಲರಿ :

 

ಎಂ. ಶೇಷಾದ್ರಿ ಹಾಗೂ ಎಸ್.ಆರ್.ರಾವ್‍ರವರು ಕಿಬ್ಬನಹಳ್ಳಿಯಿಂದ ಸಂಗ್ರಹಿಸಿ ದಾನವಾಗಿ ನೀಡಿದ ಆದಿ ಶಿಲಾಯುಗದ ಮೊಣಚದ ಕಲ್ಲಿನ ಆಯುಧಗಳು, ಕಿಬ್ಬನಹಳ್ಳಿ, ಅತ್ತಿರಂಪಕಂ, ಬ್ರಹಗಿರಿಯ ನೂತನ ಶಿಲಾಯುಗದ ಮೊಣಚದ ಕಲ್ಲಿನ ಆಯುಧಗಳು, ಚಂದ್ರವಳ್ಳಿ, ಜಡಿಗೆನಹಳ್ಳಿ, ಬ್ರಹಗಿರಿಯ ಬೃಹತ್ ಶಿಲಾಯುಗದ ಮಡಿಕೆಗಳು, ಸಿಂಧೂ ಬಯಲಿನ ನಾಗರಿಕತೆಯ ಮುದ್ರಿಕೆಗಳಲ್ಲಿರುವ ಗೂಳಿಯ ಚಿತ್ರಣ ಚಿತ್ರಲಿಪಿಯ ಗಾಡಿ ಚಿತ್ರಣಗಳು, ಮತ್ತು 2ನೇ ಶತಮಾನದ ಮಥುರಾದ ಗಾಂಧಾರಶೈಲಿಯ ವಸಂತಸೇನ, 3ನೇ ಶತಮಾನದ ಸಾರನಾಥದ ಪುರುಷ ಶಿರಸ್ಸು,  5ನೇ ಶತಮಾನದ ಸಾರನಾಥದ ಗುಪ್ತಶೈಲಿಯ ಬುದ್ದನ ಶಿರಸ್ಸು, 13ನೇ ಶತಮಾನದ ಕೊನಾರ್ಕ್‍ದ ಸುವರ್ಚಾಸ, ಗಂಧದ ಕೆತ್ತನೆಯ ಆಧುನಿಕ ಶ್ರೀ ರಾಮ, ಮೇಘರಹಳ್ಳಿಯ ಆಂಜನೇಯ, ಗಣೇಶ-ಷಣ್ಮುಖ, ಸೊರಬದ ದ್ವಾರಪಾಲಕ, ಗಜಪಥ, 16ನೇ ಶತಮಾನದ ಶಿವಮೊಗ್ಗದ ಮರದ ನಾಗಪೂಜೆ ವಿಶಿಷ್ಟವಾದವುಗಳನ್ನು ಪ್ರದರ್ಶಿಸಲಾಗಿದೆ.

 

ತಾಳೆಗರಿಗಳ ಗ್ಯಾಲರಿ :

 

ಕ್ರಿ.ಶ. 18 ನೇ ಶತಮಾನದ ಕನ್ನಡ ಲಪಿ ಬಾಷೆಯ ಗೋಕರ್ಣ ಮಹಾತ್ಮೆ, ಕನ್ನಡದ ಭಾಗವತ, ಕನ್ನಡ ಲಿಪಿಯ ಕುಮಾರ ವ್ಯಾಸಭಾರತ ಗಧಾ ಪರ್ವಾದಿಗಳು,, ನಾಗರಿಲಿಪಿ ಸಂಸ್ಕೃತ ಭಾಷೆಯ ದೇವಿಮಹಾತ್ಮೆ, ವಾಲ್ಮೀಕಿ ರಾಮಾಯಣದ ಸುಂದರ ಕಾಂಡದ ತುಳುಲಿಪಿ, ಸಂಸ್ಕೃತ ಭಾಷೆ,

ಕನ್ನಡದ ಕುಮಾರವ್ಯಾಸ ಭಾರತ, ತುಳುಲಿಪಿ, ಸಂಸ್ಹೃತಭಾಷೆಯ ವೇದಭಾಗ ನಾಗರಿಲಿಪಿ, ಸಂಸ್ಕೃತ ಭಾಷೆಯ ಮಹಾಭಾರತ ತಾತ್ವರ್ಯ, ಮೊದಲಾವುಗಳನ್ನು ಪ್ರದರ್ಶಿಸಲಾಗಿದೆ.

 

ವಸ್ತುಸಂಗ್ರಹಾಲಯದ ಮಧ್ಯ ಪ್ರಾಂಗಾಣದಲ್ಲಿ :

 

ಕ್ರಿ. ಶ. 10ನೇ ಶತಮಾನದ ಕುಂದಾದ್ರಿ ಬೆಟ್ಟದ ಯಕ್ಷಿಣೀ, ಕ್ರಿ.ಶ. 12ನೇ ಶತಮಾನದ ಬಳ್ಳಿಗಾವೆಯ ಪಾರ್ಶ್ವನಾಥ ತೀರ್ಥಂಕರರು, ಕ್ರಿ.ಶ. 12ನೇ ಶತಮಾನದ ಇಸ್ಲಾಂಪುರದ ಜೈನ ಶಿಲ್ಪಗಳು, ಕ್ರಿ.ಶ. 12ನೇ ಶತಮಾನದ ಗುರುಪುರದ ಆದಿನಾಥ ತೀರ್ಥಂಕರ ಸುಂದರವಾದ ಕೆತ್ತನೆಯಿಂದ ಆಲಂಕೃತವಾಗಿದೆ. ಕ್ರಿ.ಶ. 8-9 ನೇ ಶತಮಾನದ ಬಳ್ಳಿಗಾವೆಯ ಪಂಚತಂತ್ರದ ಮುಂಗಿಸಿ ಹಾವಿನ ಕಥೆಯ ಕೆತ್ತನೆಯ ದೃಶ್ಯ ಅಮೋಘವಾಗಿದೆ, 12 ನೇ ಶತಮಾನದ ಕಲ್ಕರೆಯ ಮಹಿಷಮರ್ಥಿನಿ ಸೊಗಸಾಗಿ ಅಲಂಕೃತವಾಗಿದೆ. 12ನೇ ಶತಮಾನದ ಆನವಟ್ಟಿಯ ಸಪ್ತಮಾತ್ರಿಕಾ ಪಟ್ಟಿಕೆ ಸೊಗಸಾಗಿ ಅಲಂಕೃತವಾಗಿದೆ. 12ನೇ ಶತಮಾನದ ಸಾಲೂರಿನ ಆನಂತಶಯನ, 12ನೇ ಶತಮಾನದ ಹರಕೆರೆಯ ಯೋಗಾನಾರಾಯಣ, ಕ್ರಿ.ಶ. 12ನೇ ಶತಮಾನದ ಸೋಮಪುರದ ಉಗ್ರನರಸಿಂಹ ಕೆತ್ತನೆಯ ಶೈಲಿ ವಿಶಿಷ್ಟ ರೂಪವಾಗಿದೆ. ಕ್ರಿ.ಶ. 14ನೇ ಶತಮಾನದ ಕಣ್ಣೂರಿನ ಸೂರ್ಯ ಹಾಗೂ ಅದಕ್ಕೆ ಬಳಸಿರುವ ಶಿಲೆಯು ಬಿಳಿ ಮತ್ತು ಕೆಂಪು ವರ್ಣವು ನೋಡಲು ವರ್ಣರಂಜಿತವಾಗಿದೆ. 14ನೇ ಶತಮಾನದ ಬಾರೂರಿನ ಗಜಲಕ್ಷ್ಮೀ ಅಮೋಘವಾಗಿದೆ.

 

ಪುಸ್ತಕ ಮಾರಾಟದ ಗ್ಯಾಲರಿ :

 

ವಸ್ತುಸಂಗ್ರಹಾಲಯದಲ್ಲಿ ಇಲಾಖೆಯ ಪ್ರಕಟಣೆಯ ಪುಸ್ತಕಗಳು ಲಭ್ಯವಿದ್ದು, ಇವುಗಳು ನಮ್ಮ ನಾಡಿನ ಇತಿಹಾಸ ಪರಂಪರೆ, ಸಂಸ್ಕೃತಿ ಹಾಗೂ ಉತ್ಖನನಗಳಿಗೆ ಸಂಬಧಿಸಿದವುಗಳಾಗಿದ್ದು, ರಿಯಾಯಿತಿ ದರಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ.

                                    

ಇತ್ತೀಚಿನ ನವೀಕರಣ​ : 20-10-2020 04:23 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080